×
Ad

ರಸ್ತೆ ದಾಟುತ್ತಿದ್ದ ವೇಳೆ ಬಸ್ ಢಿಕ್ಕಿ: ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾದ ವಯೋವೃದ್ದ

Update: 2022-12-15 14:44 IST

ಮುಂಬೈ: ರಸ್ತೆ ದಾಟುತ್ತಿದ್ದ ವೇಳೆ ಬಸ್ ವೊಂದು ಢಿಕ್ಕಿ ಹೊಡೆದು ವಯೋವೃದ್ಧರೊಬ್ಬರು ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆಯು ಮುಂಬೈನ ಪೊವಾಯಿ ಪ್ರದೇಶದಲ್ಲಿ ನಡೆದಿದೆ.

ಈ ದೃಶ್ಯಾವಳಿಗಳು ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸುದ್ದಿ ಸಂಸ್ಥೆ ಎಎನ್‌ಐ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ.

ಕುರ್ತಾ-ಪೈಜಾಮಾ ಧರಿಸಿದ್ದ ವ್ಯಕ್ತಿಯೊಬ್ಬರು ಜನನಿಬಿಡ ಪ್ರದೇಶದಲ್ಲಿ ರಸ್ತೆ ದಾಟಲು ಪ್ರಯತ್ನಿಸುತ್ತಿರುವಾಗ ಟ್ರಾಫಿಕ್ ಮಧ್ಯೆ ಸಿಲುಕಿದ್ದ ಬಸ್‌ ವೊಂದು ವೃದ್ದರೊಬ್ಬರನ್ನು ಒಂದು ಕಡೆಯಿಂದ ಕೆಡವಿಕೊಂಡು ಮುಂದೆ ಸಾಗಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಆದರೆ  ಬಸ್ಸಿನಡಿ ಬಿದ್ದ  ವ್ಯಕ್ತಿ ಅದೃಷ್ಟವಶಾತ್ ಯಾವುದೇ ಗಾಯವಿಲ್ಲದೆ ಅಪಾಯದಿಂದ ಪಾರಾದರು. 47 ಸೆಕೆಂಡ್ ನ  ವೀಡಿಯೊದ ಕೊನೆಯಲ್ಲಿ ಆ ವ್ಯಕ್ತಿ ಬಸ್ ಅಡಿಯಿಂದ ಮೇಲದ್ದು ಬಂದು ಬಸ್ ಚಾಲಕನ ಕಡೆಗೆ ಹೋಗುತ್ತಿರುವುದು ಕಂಡುಬಂದಿದೆ.

ವ್ಯಕ್ತಿ ಬಸ್ಸಿನ ಕೆಳಗೆ ಬಿದ್ದುದ್ದನ್ನು ಕಂಡ  ಇತರ ಕಾರು ಚಾಲಕರು ಬೊಬ್ಬೆ ಹಾಕಿದರು. ಆಗ ಬಸ್ ಚಾಲಕ ತಕ್ಷಣವೇ ವಾಹನವನ್ನು ನಿಲ್ಲಿಸಿ ಬಾಗಿಲು ತೆರೆದು ವ್ಯಕ್ತಿ ಜೀವಂತವಾಗಿದ್ದಾನೆಯೇ ಎಂದು ಪರಿಶೀಲಿಸಿದ್ದಾನೆ.

ಲೇಕ್ ಸೈಡ್ ಕಾಂಪ್ಲೆಕ್ಸ್ ಬಳಿಯ ಎವರೆಸ್ಟ್ ಹೈಟ್ಸ್ ಕಟ್ಟಡದ ಹೊರಗೆ ಮಂಗಳವಾರ ಘಟನೆ ನಡೆದಿದೆ. ಹಲವಾರು ಬಳಕೆದಾರರು ಟ್ವಿಟರ್ ಹಾಗೂ  ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ.

Similar News