ಡಿ.18ರಂದು ಉಡುಪಿ ಕೆಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ರಜತ ಸಂಭ್ರಮ ಸಮಾರಂಭ

Update: 2022-12-15 14:31 GMT

ಉಡುಪಿ, ಡಿ.15: ಉಡುಪಿ ಕೆಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಅಸ್ತಿತ್ವಕ್ಕೆ ಬಂದು 25 ವರ್ಷಗಳು ಪೂರ್ಣಗೊಂಡಿದ್ದು, ಸಂಸ್ಥೆಯ ರಜತ ಸಂಭ್ರಮದ ಸಮಾರಂಭವನ್ನು ಇದೇ ಡಿ.18ರಂದು ರವಿವಾರ ಪೂರ್ವಾಹ್ನ 10:30ಕ್ಕೆ ಉಡುಪಿಯ ಶೋಕಮಾತಾ ಇಗರ್ಜಿ ವಠಾರದ ‘ಅವೆ ಮರಿಯಾ’ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು  ಉಡುಪಿ ಕೆಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಅಲೋಶಿಯಸ್ ಡಿ ಅಲ್ಮೇಡಾ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಳೆದ 25 ವರ್ಷಗಳ ಸಾಧನೆಯನ್ನು ವಿವರಿಸುತ್ತಾ ಅವರು ಈ ವಿಷಯ ತಿಳಿಸಿದರು.  ಉಡುಪಿ ಶಾಸಕ ಕೆ.ರಘುಪತಿ ಭಟ್ ಸಮಾರಂಭವನ್ನು ಉದ್ಘಾಟಿಸಲಿದ್ದು, ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಆಶೀರ್ವಚನ ನೀಡಲಿದ್ದಾರೆ ಎಂದರು.

ಅಲೋಶಿಯಸ್ ಡಿ ಅಲ್ಮೇಡಾರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭ ದಲ್ಲಿ ಕಲ್ಯಾಣಪುರದ ಮಿಲಾಗ್ರಿಸ್ ಕೆಥೆಡ್ರಲ್‌ನ ರೆಕ್ಟರ್ ಅ.ವಂ. ವಲೇರಿಯನ್ ಮೆಂಡೋನ್ಸಾ, ಶೋಕಮಾತಾ ಇಗರ್ಜಿಯ ಧರ್ಮಗುರು ಗಳಾದ ವಂ. ಚಾರ್ಲ್ಸ್ ಮಿನೇಜಸ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಸಹಕಾರ ಸಂಘಗಳ ಉಪನಿಬಂಧಕರಾದ ಲಕ್ಷ್ಮೀನಾರಾಯಣ, ಕುಂದಾಪುರ ಉಪವಿಭಾಗದ ಸಹಾಯಕ ನಿಬಂಧಕಿ ಲಾವಣ್ಯ ಹಾಗೂ ಕೆಥೋಲಿಕ್ ಸಭಾ ಉಡುಪಿ ಪ್ರದೇಶ್‌ನ ಅಧ್ಯಕ್ಷೆ ಮೇರಿ ಡಿಸೋಜ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಂಸ್ಥೆಯ ತನ್ನ ವೆಬ್‌ಸೈಟ್‌ನ್ನು ಪ್ರಾರಂಭಿಸಿದ್ದು, ಇದರ ಅನಾವರಣವು ಡಿ.18ರಂದು ನಡೆಯಲಿದೆ. ಅಲ್ಲದೇ ರಜತ ಮಹೋತ್ಸವದ ಸವಿನೆನಪಿ ಗಾಗಿ ‘ರಜತ ಸೌರಭ’ ಸ್ಮರಣ ಸಂಚಿಕೆಯನ್ನು ಸಹ ಹೊರತರಲಾಗುತ್ತಿದೆ ಎಂದವರು ನುಡಿದರು.

ಸೊಸೈಟಿ ಪರಿಚಯ: ಕೆಥೋಲಿಕ್ ಸಭಾ ಕಲ್ಯಾಣಪುರ ಮತ್ತು ಉಡುಪಿ ವಾರ್ಡ್‌ಗಳ ಆಶ್ರಯದಲ್ಲಿ 20 ಮಂದಿ ಪ್ರವರ್ತಕರ ಮೂಲಕ 1997ರ ಡಿ.16ರಂದು ಅಸ್ತಿತ್ವಕ್ಕೆ ಬಂದ ಉಡುಪಿ ಕೆಥೋಲಿಕ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಗೆ ಈಗ 25ರ ಹರೆಯ. ದಿ.ಡೆನಿಸ್ ಡಿಸಿಲ್ವ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿದ್ದು, ಇದುವರೆಗೆ ನಾಲ್ವರು ಅಧ್ಯಕ್ಷರು ಸಂಸ್ಥೆಯನ್ನು ಮುನ್ನಡೆಸಿರುವರು. ಪ್ರಸ್ತುತ ಅಲೋಶಿಯಸ್ ಡಿ ಅಲ್ಮೇಡಾ ಹಾಗೂ ಲೂವಿಸ್ ಲೋಬೊ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತಿದ್ದಾರೆ.

ಉಡುಪಿ ಸೂಪರ್‌ಬಜಾರ್‌ನ ಕ್ರಿಸ್ತಜ್ಯೋತಿ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ಸಂಸ್ಥೆಯ ಆಡಳಿತ ಕಚೇರಿ ಜೊತೆಗೆ ಪ್ರಧಾನ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಮಲ್ಪೆ, ಉದ್ಯಾವರ ಹಾಗೂ ಶಿರ್ವಗಳಲ್ಲಿ ಶಾಖಾ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.

2021-22ರ ಆರ್ಥಿಕ ವರ್ಷಾಂತ್ಯಕ್ಕೆ ಸಂಘವು 5437ಸದಸ್ಯರನ್ನು ಹೊಂದಿದ್ದು, 96.04 ಲಕತ್ಷ ರೂ.ಪಾಲು ಬಂಡವಾಳ, 25.30 ಕೋಟಿ ರೂ.ಠೇವಣಿ, 1.49 ಕೋಟಿ ರೂ.ನಿಧಿಗಳು, 9.71 ಕೋಟಿ ರೂ.ಹೂಡಿಕೆ, 17.07 ಕೋಟಿ ರೂ.ಹೊರ ಬಾಕಿ ಸಾಲ ಹಾಗೂ 27 ಕೋಟಿ ರೂ.ಗಳಷ್ಟು ದುಡಿಯುವ ಬಂಡವಾಳವನ್ನು ಹೊಂದಿದೆ. ಸಂಘದ ಸಾಲ ವಸೂಲಾತಿ ಪ್ರಮಾಣ ಶೇ.94 ಆಗಿದೆ. ಈ ವರ್ಷ ಸಂಘ 44.10 ಲಕ್ಷ ರೂ.ನಿವ್ವಳ ಲಾಭ ಗಳಿಸಿದ್ದು, ಶೇ.17ರಷ್ಟು ಡಿವಿಡೆಂಟನ್ನು ಸದಸ್ಯರಿಗೆ ವಿತರಿಸಿದೆ ಎಂದು ಡಿ ಅಲ್ಮೇಡಾ ವಿವರಿಸಿದರು.

ಕೇವಲ ಬ್ಯಾಂಕಿಂಗ್ ಸೇವೆಯನ್ನು ಮಾತ್ರವಲ್ಲದೇ ಸಂಸ್ಥೆಯು ಹಲವು ಸಾಮಾಜಿಕ ಸೇವಾ ಕಾರ್ಯವನ್ನು ಮಾಡುತ್ತಿದೆ. ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅನಾರೋಗ್ಯ ಪೀಡಿತರಿಗೆ ಸಹಾಯಧನವನ್ನು ನೀಡುತ್ತಿದೆ.ರಜತ ಸಂಭ್ರಮದ ಪ್ರಯುಕ್ತ ಪಾಂಬೂರಿನ ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರ, ಹ್ಯೂಮಾನಿಟಿ ಟ್ರಸ್ಟ್ ಬೆಳ್ಮಣ್, ಮಮತೆಯ ತೊಟ್ಟಿಲು ಸಂತೆಕಟ್ಟೆ, ಹಝರತ್ ಸಾದತ್ ವೃದ್ಧಾಶ್ರಮ ಕಾಪು ಅಲ್ಲದೇ ಹಿಂದುಳಿದ 15 ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಆರ್ಥಿಕ ಸಹಾಯವನ್ನು ನೀಡುತಿದ್ದೇವೆ ಎಂದರು.

ಮುಂದಿನ ಯೋಜನೆ: ಸಂಸ್ಥೆಯ ಮುಂದಿನ ಯೋಜನೆಯಾಗಿ ತಾಲೂಕು ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೊಸೈಟಿಯ ಶಾಖೆಗಳನ್ನು ಜಿಲ್ಲಾ ಮಟ್ಟಕ್ಕೆ ವಿಸ್ತರಿಸುವುದು, ಸಂಸ್ಥೆಯ ಆಡಳಿತ ಕಚೇರಿ ಹಾಗೂ ಶಾಖಾ ಕಚೇರಿಗಳಿಗೆ ಸ್ವಂತ ಕಟ್ಟಡ ಹೊಂದುವ ಗುರಿ ಇದೆ. 2022-23ನೇ ಆರ್ಥಿಕ ವರ್ಷದ ಕೊನೆಗೆ 1.10 ಕೋಟಿ ರೂ.ಪಾಲು ಬಂಡವಾಳ, 35 ಕೋಟಿ ರೂ.ಠೇವಣಿ, 25 ಕೋಟಿ ರೂ. ಹೊರಸಾಲ, 40 ಕೋಟಿ ರೂ. ದುಡಿಯುವ ಬಂಡವಾಳವನ್ನು ಹೊಂದುವ ಗುರಿಯೊಂದಿಗೆ 70 ಲಕ್ಷರೂ.ನಿವ್ವಳ ಲಾಭ ಪಡೆದು ಶೇ.18ರಷ್ಟು ಡಿವಿಡೆಂಟ್‌ನ್ನು ಸದಸ್ಯರಿಗೆ ವಿತರಿಸುವ ಮಹದಾಸೆ ಆಡಳಿತ ಮಂಡಳಿಗಿದೆ ಎಂದು ಅಲೋಶಿಯಸ್ ಡಿಅಲ್ಮೇಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೊಸೈಟಿಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಲೂವಿಸ್ ಲೋಬೊ, ನಿರ್ದೇಶಕರಾದ ಮಾಜಿ ಅಧ್ಯಕ್ಷ ಫೆಲಿಕ್ಸ್ ಪಿಂಟೋ, ಇಗ್ನೇಷಿಯಸ್ ಮೋನಿಸ್ ಹಾಗೂ ಪ್ರಧಾನ ವ್ಯವಸ್ಥಾಪಕ ಸಂದೀಪ್ ಎ.ಫೆರ್ನಾಂಡೀಸ್ ಉಪಸ್ಥಿತರಿದ್ದರು.

Similar News