ಸಾಮಾಜಿಕ ಜಾಲತಾಣಗಳಲ್ಲಿ 'ಪಠಾಣ್'ಗೆ ಬಹಿಷ್ಕಾರ: ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ ಶಾರುಖ್‌ ಖಾನ್‌

Update: 2022-12-15 15:40 GMT

ಮುಂಬೈ: ತಮ್ಮ ಮುಂಬರುವ 'ಪಠಾಣ್' (Pathaan) ಚಿತ್ರದ ಬಗ್ಗೆ ಬಲಪಂಥೀಯರು ವಿವಾದ ಸೃಷ್ಟಿಸಿರುವ ನಡುವೆಯೇ ಶಾರುಖ್ ಖಾನ್ (Shah Rukh Khan) ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಫಿಲ್ಮ್ ಫೆಸ್ಟಿವಲ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾರುಖ್ ಖಾನ್, ʼಪಠಾಣ್‌ʼ ಚಿತ್ರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಕೇಳಿ ಬರುತ್ತಿರುವ ಬಹಿಷ್ಕಾರದ ಕರೆಯ ನಡುವೆಯೇ ಸಾಮಾಜಿಕ ಜಾಲತಾಣಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  

ಬಂಗಾಳಿ ಭಾಷೆಯಲ್ಲಿ ಮಾತನಾಡುವ ಮೂಲಕ ಕೋಲ್ಕತ್ತಾ ಚಲನಚಿತ್ರೋತ್ಸವದ ಭಾಷಣವನ್ನು ಪ್ರಾರಂಭಿಸಿದ ಶಾರುಖ್ ಖಾನ್,  ಆಧುನಿಕ ಕಾಲ ಮತ್ತು ಸಾಮಾಜಿಕ ಮಾಧ್ಯಮಗಳ ಕುರಿತು ಮಾತನಾಡಿದರು. 

“ಸಾಮಾಜಿಕ ಮಾಧ್ಯಮವು ಸಾಮಾನ್ಯವಾಗಿ ಒಂದು ನಿರ್ದಿಷ್ಟ ಸಂಕುಚಿತ ದೃಷ್ಟಿಕೋನದಿಂದ ನಡೆಸಲ್ಪಡುತ್ತದೆ, ಅದು ಮಾನವ ಸ್ವಭಾವವನ್ನು ಅದರ ಕೀಳು ಸ್ವಭಾವಕ್ಕೆ ಸೀಮಿತಗೊಳಿಸುತ್ತದೆ. ನಕಾರಾತ್ಮಕತೆಯು ಸಾಮಾಜಿಕ ಮಾಧ್ಯಮ ಬಳಕೆಯನ್ನು ಹೆಚ್ಚಿಸುತ್ತದೆ ಮತ್ತು ಆ ಮೂಲಕ ಅದರ ವಾಣಿಜ್ಯ ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ನಾನು ಎಲ್ಲೋ ಓದಿದ್ದೇನೆ. ಅಂತಹ ಅನ್ವೇಷಣೆಗಳು ಸಾಮೂಹಿಕ ನಿರೂಪಣೆಯನ್ನು ವಿಭಜಿಸುವ ಮತ್ತು ವಿನಾಶಕಾರಿಯಾಗಿ ಮಾಡುತ್ತದೆ" ಎಂದು ಹೇಳಿದ್ದಾರೆ ಎಂದು ndtv.com ವರದಿ ಮಾಡಿದೆ.

“ಸಾಮಾಜಿಕ ಮಾಧ್ಯಮವು ಸಿನಿಮಾವನ್ನು ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ ಎಂಬ ನಂಬಿಕೆಗೆ ವಿರುದ್ಧವಾಗಿ, ಸಿನಿಮಾವು ಈಗ ಹೆಚ್ಚು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎನ್ನುವುದಕ್ಕಿಂತಲೂ ಸಿನಿಮಾ ಮಾನವ ನಡವಳಿಕೆಯನ್ನು ತೋರಿಸುತ್ತದೆ, ಇದು ಮಾನವ ಸಹೋದರತ್ವ ಮತ್ತು ಸಹಾನುಭೂತಿಯನ್ನು ತರುತ್ತದೆ” ಎಂದು ಶಾರುಖ್‌ ಖಾನ್‌ ಹೇಳಿದ್ದಾರೆ.

“ನಾವು ಸ್ವಲ್ಪ ಸಮಯದವರೆಗೆ ಭೇಟಿಯಾಗಲು ಸಾಧ್ಯವಾಗಿರಲಿಲ್ಲ, ಆದರೆ ಜಗತ್ತು ಈಗ (ಕೊರೋನದ ಬಳಿಕ) ಸಾಮಾನ್ಯವಾಗುತ್ತಿದೆ. ನಾವೆಲ್ಲರೂ ಸಂತೋಷವಾಗಿದ್ದೇವೆ ಮತ್ತು ನಾನು ಅತ್ಯಂತ ಸಂತೋಷವಾಗಿದ್ದೇನೆ. "ಜಗತ್ತು ಏನೇ ಮಾಡಿದರೂ ನಾನು, ನೀವು ಸಕರಾತ್ಮಕವಾಗಿರುತ್ತೇವೆ. ಸಕರಾತ್ಮಕ ಜನರು (ಇನ್ನೂ) ಜೀವಂತವಾಗಿದ್ದಾರೆ" ಎಂದು ಶಾರುಖ್‌ ಖಾನ್‌ ಟ್ರೋಲ್ ಗಳಿಗೆ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ.

Similar News