×
Ad

ಉಡುಪಿ : ಡಿ.17ರಂದು ಎನ್‌ಎಸ್‌ಯುಐನಿಂದ ಕಾಲೇಜುಗಳ ಬಂದ್‌ಗೆ ಕರೆ

ವಿದ್ಯಾರ್ಥಿಗಳು ಎದುರಿಸುವ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯ

Update: 2022-12-15 21:52 IST

ಉಡುಪಿ, ಡಿ.15: ರಾಜ್ಯದ ಕಾಲೇಜು ವಿದ್ಯಾರ್ಥಿಗಳು ವಿವಿಧ ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದಂತೆ ಎದುರಿಸುತ್ತಿರುವ ಸಮಸ್ಯೆಗಳ ಕಡೆ ಸರಕಾರ ಹಾಗೂ ಜನತೆಯ ಗಮನ ಸೆಳೆಯಲು ಹಾಗೂ ಕೂಡಲೇ ಪರಿಹಾರಕ್ಕೆ ಒತ್ತಾಯಿಸಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ) ಡಿ.17ರಂದು ಕಾಲೇಜುಗಳ ಬಂದ್‌ಗೆ ಕರೆ ನೀಡಿವೆ.

ಗುರುವಾರ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್ ಈ ವಿಷಯ ತಿಳಿಸಿದರು. ಶಿಕ್ಷಣದ ಖಾಸಗೀಕರಣ ಹಾಗೂ ವ್ಯಾಪಾರೀಕರಣಕ್ಕೆ ಮುಂದಾಗಿರುವ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರಗಳು, ಸಕಾಲದಲ್ಲಿ ಫಲಿತಾಂಶಗಳ ಘೋಷಣೆಯೂ ಸೇರಿದಂತೆ ವಿದ್ಯಾರ್ಥಿಗಳು ಎದುರಿಸುತ್ತಿ ರುವ ಸಮಸ್ಯೆಗಳ ಕಡೆಗೆ ಗಮನವನ್ನೇ ಹರಿಸುತ್ತಿಲ್ಲ ಎಂದು ಆರೋಪಿಸಿದರು.

ಪರೀಕ್ಷೆಗಳು ಮುಗಿದು ಆರು ತಿಂಗಳು ಕಳೆದರೂ ಇನ್ನೂ ಫಲಿತಾಂಶ ಪ್ರಕಟಗೊಳ್ಳದೇ ವಿದ್ಯಾರ್ಥಿಗಳು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸ ಬೇಕಾಗಿದೆ. ಕೆಲವು ಕಡೆ ಉತ್ತರ ಪತ್ರಿಕೆಗಳ ಮೌಲ್ಯಮಾಪನವೇ ನಡೆದಿಲ್ಲ ಎಂದು ಸೌರಭ ಬಲ್ಲಾಳ್ ಹೇಳಿದರು.

ಹಿಂದೆಲ್ಲಾ ಪರೀಕ್ಷೆಗಳ ಫಲಿತಾಂಶಗಳು ನಿಗದಿತ ದಿನಕ್ಕಿಂತ ಮೊದಲೇ ಪ್ರಕಟಗೊಳ್ಳುತಿದ್ದವು. ಕೆಲವೊಮ್ಮೆ ಸ್ವಲ್ಪ ವಿಳಂಬವಾದರೂ ಪ್ರಕಟ ಗೊಳ್ಳುತಿದ್ದವು. ಆದರೆ ಈ ಬಾರಿ ಫಲಿತಾಂಶ ಬರುವ ಲಕ್ಷಣವೇ ಕಾಣಿಸುವುದಿಲ್ಲ. 

ಮತ್ತೊಂದು ಕಡೆ ವರ್ಷಕ್ಕೂ ಅಧಿಕ ಸಮಯದಿಂದ ಯಾವುದೇ ವಿದ್ಯಾರ್ಥಿ ವೇತನವನ್ನು ನೀಡುತಿಲ್ಲ. ಇದರಿಂದ ಅದನ್ನೇ ನಂಬಿ ಕಾಲೇಜು ಶಿಕ್ಷಣಕ್ಕೆ ಬಂದಿರುವ ವಿದ್ಯಾರ್ಥಿಗಳು ಕಾಲೇಜು ಶುಲ್ಕ ಕಟ್ಟಲೂ ಪರದಾಡುವಂತಾಗಿದೆ. ಮತ್ತೊಂದು ಕಡೆ ಸರಕಾರಿ ಶಾಲೆಗಳಲ್ಲೂ ಶುಲ್ಕವನ್ನು ಹೆಚ್ಚಿಸಲಾಗಿದೆ. ಕೊರೋನಾ ನಂತರದ ದಿನಗಳಲ್ಲಿ  ವಿದ್ಯಾರ್ಥಿ ಸಮೂಹಕ್ಕೆ ಸಾಕಷ್ಟು ತೊಂದರೆ ಗಳಾಗಿವೆ. ಇವನ್ನು ಪರಿಹರಿಸಲು ಒತ್ತಾಯಿಸಿದ್ದರೂ ಸರಕಾರಗಳು ಮೀನ ಮೇಷ ಎಣಿಸುತ್ತಿವೆ ಎಂದು ಸೌರಭ್ ಬಲ್ಲಾಳ್ ಹೇಳಿದ್ದಾರೆ.

ಬೇಡಿಕೆಗಳು: ಕೂಡಲೇ ಪರೀಕ್ಷಾ ಫಲಿತಾಂಶ ಪ್ರಕಟಣಗೊಳ್ಳಬೇಕು. ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡಬೇಕು ಹಾಗೂ ಸರಕಾರಿ ಕಾಲೇಜುಗಳ ಶುಲ್ಕವನ್ನು ಕಡಿಮೆ ಮಾಡಬೇಕೆಂಬುದು ತಮ್ಮ ಬೇಡಿಕೆಯಾಗಿದ್ದು, ಇದನ್ನು ಈಡೇರಿಸುವಂತೆ ಒತ್ತಾಯಿಸಿ ಡಿ.17ರಂದು ಸ್ವಯಂಪ್ರೇರಿತ ಬಂದ್‌ಗೆ ಎನ್‌ಎಸ್‌ಯುಐ ಕರೆ ನೀಡಿದೆ ಎಂದರು.

ಇವನ್ನೆಲ್ಲ ಸರಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಯಾವುದೇ ಪ್ರಯೋಜನ ಆಗಿಲ್ಲ. ಈ ಹಿನ್ನೆಲೆ ಯಲ್ಲಿ ಮೊದಲ ಹಂತದಲ್ಲಿ ವಿದ್ಯಾರ್ಥಿಗಳೇ ಸ್ವಯಂಪ್ರೇರಿತರಾಗಿ ಶನಿವಾರ ಕಾಲೇಜುಗಳ ಬಂದ್ ನಡೆಸುವಂತೆ ಕರೆ ನೀಡಲಾಗಿದೆ. ಇದಕ್ಕೂ ಸರಕಾರ ಬಗ್ಗದಿದ್ದರೆ ಮುಂದೆ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳುವುದಾಗಿ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಶರತ್ ಕುಂದರ್, ಅನೀಶ್ ಪೂಜಾರಿ, ಸೈಯ್ಯದ್ ಫುರ್ಕಾನ್, ರಕ್ಷಿತ್ ರಾಜ್ ಹಾಗೂ ಸೈಯದ್ ಅದ್ನಾನ್ ಉಪಸ್ಥಿತರಿದ್ದರು.

Similar News