×
Ad

ಡಿ.17ರಿಂದ ಬ್ರಹ್ಮಾವರದಲ್ಲಿ ರೋಟರಿ ಕ್ಲಬ್‌ ವತಿಯಿಂದ ಕ್ರೀಡೋತ್ಸವ

Update: 2022-12-15 21:56 IST

ಉಡುಪಿ, ಡಿ.15: ಬ್ರಹ್ಮಾವರ ರೋಟರಿ ಕ್ಲಬ್ ಹಾಗೂ ವಲಯ 3ರ 9 ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ರೋಟರಿ ಜಿಲ್ಲೆ 3182ರ ಕ್ರೀಡೋತ್ಸವ  ಡಿ.17 ಮತ್ತು 18ರಂದು ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕ್ರೀಡಾಕೂಟದ ಸಭಾಪತಿ ಬಿ.ಎಂ. ಭಟ್ ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರೋಟರಿ ಜಿಲ್ಲೆ 3182ರ ವ್ಯಾಪ್ತಿಯ ಜಿಲ್ಲೆಗಳಾದ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳ 87 ರೋಟರಿ ಕ್ಲಬ್‌ಳ ಸದಸ್ಯರು 11 ವಲಯಗಳ ಮೂಲಕ ಕ್ರೀಡೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಡಿ.17ರ ಶನಿವಾರ ವಿವಿಧ ಪಂದ್ಯಾಟಗಳಾದ ವಾಲಿಬಾಲ್, ಥ್ರೋಬಾಲ್, ಕ್ರಿಕೆಟ್, ಶಟ್ಲ್ ಬ್ಯಾಡ್ಮಿಂಟನ್, ಟೇಬಲ್‌ ಟೆನಿಸ್, ಕೇರಂ, ಚೆಸ್, ಲಾನ್ ಟೆನಿಸ್ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗಳು ಒಳಾಂಗಣ ಹಾಗೂ ಹೊರಾಂಗಣ ಗಳಲ್ಲಿ ನಡೆಯಲಿವೆ. ಡಿ.18ರಂದು ವಿವಿಧ ಓಟಗಳು, ಜಿಗಿತಗಳು, ಎಸೆತಗಳು ಹಾಗೂ ಮನೋರಂಜನಾ ಆಟಗಳು ನಡೆದು ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದರು.

ಕ್ರೀಡಾಕೂಟವನ್ನು ಡಿ.17ರ ಬೆಳಗ್ಗೆ 9ಗಂಟೆಗೆ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಮತಾ ಮಾಬೆನ್ ಉದ್ಘಾಟಿಸುವರು. ರೋಟರಿ ಜಿಲ್ಲೆ 3182ರ ತರಬೇತುದಾರ ಅಭಿನಂದನ್ ಶೆಟ್ಟಿ ಕ್ರೀಡಾಜ್ಯೋತಿ ಬೆಳಗಿಸುವರು.  ಕಾರ್ಯಕ್ರಮದಲ್ಲಿ ಧ್ಯಾನ್‌ಚಂದ್ ಪ್ರಶಸ್ತಿ ಪುರಸ್ಕೃತೆ ಅಶ್ವಿನಿ ಅಕ್ಕುಂಜೆ ಹಾಗೂ ರಾಷ್ಟ್ರೀಯ ಜಾವೆಲಿನ್ ಎಸೆತಗಾರ್ತಿ ಕರೀಷ್ಮಾ ಸನಿಲ್ ಪಾಲ್ಗೊಳ್ಳುವರು.

ಸಂಜೆ ನಡೆಯುವ ಬಹುಮಾನ ವಿತರಣಾ ಸಮಾರಂಭದಲ್ಲಿ ಜ್ಞಾನವಸಂತ ಶೆಟ್ಟಿ, ಭರತೇಶ್ ಹಾಗೂ ರಾಜಾರಾಮ್ ಭಟ್ ಅತಿಥಿಗಳಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸುವರು.

ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್‌ನ ಸಹಾಯಕ ಗವರ್ನರ್ ಆನಂದ ಶೆಟ್ಟಿ, ಆರೂರು ತಿಮ್ಮಪ್ಪ ಶೆಟ್ಟಿ ಹಾಗೂ ದಿನೇಶ್ ನಾಯರಿ ಉಪಸ್ಥಿತರಿದ್ದರು.

Similar News