ಪಡುಕೆರೆ ಕಡಲ ಕಿನಾರೆಯಲ್ಲಿ ‘ಲವ್ ಲೀ’ ಚಿತ್ರೀಕರಣ: ವಶಿಷ್ಠ ಸಿಂಹ- ಸ್ಟೆಫಿ ಪಟೇಲ್ ನಾಯಕ ನಾಯಕಿಯರು
ಉಡುಪಿ, ಡಿ.15: ಖಳನಾಯಕನಾಗಿ ಗುರುತಿಸಿಕೊಂಡಿರುವ ಪ್ರತಿಭಾನ್ವಿತ ನಟ, ಗಡಸು ಧ್ವನಿಯ ವಶಿಷ್ಟ ಸಿಂಹ ಮೊದಲ ಬಾರಿ ನಾಯಕನಾಗಿ ಹಾಗೂ ಜಾರ್ಖಂಡ್ ಮೂಲದ ಹಿಂದಿ, ತೆಲುಗು, ತಮಿಳು ಚಿತ್ರಗಳಲ್ಲಿ ಈಗಾಗಲೇ ನಟಿಸಿ, ಕನ್ನಡದಲ್ಲಿ ಮೊದಲ ಬಾರಿ ಅಭಿನಂಯಿಸಿರುವ ಸ್ಟೆಫಿ ಪಟೇಲ್ ನಾಯಕಿಯಾಗಿರುವ ‘ಲವ್ ಲೀ’ ಕನ್ನಡ ಚಲನಚಿತ್ರದ ಚಿತ್ರೀಕರಣ ಕಳೆದೊಂದು ವಾರದಿಂದ ಮಲ್ಪೆ ಪಡುಕೆರೆಯ ಕಡಲ ಕಿನಾರೆಯಲ್ಲಿ ನಡೆಯುತ್ತಿದೆ.
ಅಭುವನಸ ಕ್ರಿಯೇಷನ್ಸ್ ಅವರ ಬ್ಯಾನರ್‌ನಲ್ಲಿ ಸಿದ್ಧಗೊಳ್ಳುತ್ತಿರುವ ಈ ಚಿತ್ರಕ್ಕೆ ಚೇತನ್ ಕೇಶವ್ ಮೊದಲ ಬಾರಿ ಪೂರ್ಣಕಾಲಿನ ನಿರ್ದೇಶಕರಾಗಿದ್ದಾರೆ. ಮಫ್ತಿ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಚೇತನ್ ಆನಂದ್, ಈ ಚಿತ್ರಕ್ಕಾಗಿಯೇ ಪಡುಕೆರೆ ಶಾಂತಿನಗರದಲ್ಲಿ ಕಡಲ ತೀರದಲ್ಲೇ ಲಕ್ಷಾಂತರ ರೂ.ವೆಚ್ಚದಲ್ಲಿ ಡುಪ್ಲೆಕ್ಸ್ ಮಾದರಿಯ ಭವ್ಯ ಒಳಾಂಗಣವನ್ನು ಹೊಂದಿರುವ ತಾತ್ಕಾಲಿಕ ಮನೆಯೊಂದನ್ನು ನಿರ್ಮಿಸಿದ್ದಾರೆ. ಚಿತ್ರದ ಚಿತ್ರೀಕರಣವೆಲ್ಲಾ ಈ ಮನೆಯಲ್ಲೇ ನಡೆಯುತ್ತಿದೆ.
ಇಲ್ಲಿ ಇನ್ನು 4-5 ದಿನಗಳ ಶೂಟಿಂಗ್ ಬಾಕಿ ಇದೆ. ಇದು ಮುಗಿಸಿದರೆ ಚಿತ್ರ ಶೇ.80ರಷ್ಟು ಮುಗಿದಂತೆ. ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿತ್ತು. ಇನ್ನು ಚಿತ್ರದ ಒಂದು ಹಾಡಿನ ಚಿತ್ರೀಕರಣ ಲಂಡನ್‌ನಲ್ಲಿ ಹಾಗೂ ಕ್ಲೈಮಾಕ್ಸ್ ಫೈಟಿಂಗ್ ಮಾತ್ರ ಬಾಕಿ ಉಳಿದಿದೆ ಎಂದು ನಿರ್ದೇಶಕ ಚೇತನ್ ಕೇಶವ್ ತಿಳಿಸಿದರು.
‘ಲವ್ ಲೀ’ ಪ್ರೀತಿ-ಪ್ರೇಮ, ಫೈಟಿಂಗ್ ಎಲ್ಲವನ್ನೂ ಹೊಂದಿರುವ ಎಲ್ಲರಿಗೂ ಇಷ್ಟವಾಗುವ ಕತೆಯನ್ನು ಹೊಂದಿರುವ ಚಿತ್ರ. ಇದು 3-4 ಜಾನರ್ ಮಿಕ್ಸ್ ಮಾಡಿ ಮಾಡಿರುವ ಚಿತ್ರವಾಗಿದೆ. ಮನೆಮಂದಿಗೆಲ್ಲಾ ಇಷ್ಟವಾಗುವಂತೆ ನಿರ್ಮಿಸುತಿದ್ದೇವೆ ಎಂದು ಚೇತನ್ ಕೇಶವ್ ನುಡಿದರು.
ಚಿತ್ರದ ಇಲ್ಲಿನ ಹೈಲೈಟ್ ಎಂಬುದು ಈ ಮನೆ. ಹೂಡೆಯ ಡೆಲ್ಟಾ ಬೀಚ್ ಹಾಗೂ ಇನ್ನೂ ಮೂರ್ನಾಲ್ಕು ಕಡೆ ನೋಡಿದ ಬಳಿಕ ಪಡುಕೆರೆಯ ಈ ಪ್ರಶಾಂತ ಹಾಗೂ ಮನಸೆಳೆಯುವ ಜಾಗವನ್ನು ಆಯ್ಕೆ ಮಾಡಿ ಭಾರೀ ಶ್ರಮದಿಂದ ಮನೆಯನ್ನು ನಿರ್ಮಿಸಲಾಗಿದೆ ಎಂದು ಚಿತ್ರದ ಕಲಾ ನಿರ್ದೇಶಕ ಪ್ರತಾಪ್ ಮೆಂಡನ್ ನುಡಿದರು. 5-6 ಅಡಿಗೆ ನೀರು ಸಿಗುವ ಈ ಮರಳಲ್ಲಿ ಸಿಮೆಂಟ್ ಫಿಲ್ಲರ್ ಮೇಲೆ ಈ ಮನೆಯನ್ನು ನಿರ್ಮಿಸಲಾಗಿದೆ. ಮನೆಯ ಮಹಡಿ ಮೇಲೂ ಒಮ್ಮೆಗೆ 100 ಮಂದಿ ನಿಲ್ಲುವಂತೆ ನಿರ್ಮಿಸಲಾಗಿದೆ ಎಂದು ಪಡುಬಿದ್ರಿಯವರಾದ ಮೆಂಡನ್ ತಿಳಿಸಿದರು.
ನಾಯಕ ವಶಿಷ್ಟ ಸಿಂಹರಿಗೆ ಈ ಚಿತ್ರದ ಮೇಲೆ ತುಂಬಾ ಭರವಸೆ ಇದೆ. ಮೊನ್ನೆ ತಾನೇ ನಟಿ ಹರಿಪ್ರಿಯಾರೊಂದಿಗೆ ನಿಶ್ಚಿತಾರ್ಥ ಮುಗಿಸಿಕೊಂಡು ನೇರವಾಗಿ ಇಲ್ಲಿಗೆ ಬಂದು ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾಗಿ ಅವರು ತಿಳಿಸಿದರು. ಕರಾವಳಿ ನನಗೆ ದೂರದ್ದೇನಲ್ಲಾ. ಸಣ್ಣವನಿದ್ದಾಗ ಪ್ರತಿ ರಜೆಗೂ ನಾನು ಹೊಸಂಗಡಿಯಲ್ಲಿದ್ದ ನನ್ನ ಸೋದರ ಮಾವನ ಮನೆಗೆ ಬರುತಿದ್ದೆ. ಕರಾವಳಿಯನ್ನು ನಾನು ಸಾಕಷ್ಟು ಸುತ್ತಿದ್ದೇನೆ. ಆದರೆ ಈಗ ಅದನ್ನು ತೀರಾ ಹತ್ತಿರದಿಂದ ಅರಿಯುತಿದ್ದೇನೆ ಎಂದರು.
ಸ್ಟೆಫಿ ಪಟೇಲ್‌ಗೆ ಇದು ಮೊದಲ ಕನ್ನಡ ಸಿನಿಮಾ. ನನಗೆ ಕನ್ನಡ ಚಿತ್ರದ ವಾತಾವರಣ ತುಂಬಾ ಹಿಡಿಸಿದೆ. ಎಲ್ಲರೂ ಆತ್ಮೀಯರಾಗಿದ್ದಾರೆ. ಕನ್ನಡವನ್ನೂ ಕಲಿಯುತಿದ್ದೇನೆ ಎಂದು ಕೆಲವು ಶಬ್ದ ಕನ್ನಡವನ್ನೂ ಮಾತನಾಡಿ ದರು. ಚಿತ್ರದ ಸಿನಿಮಾಟೋಗ್ರಾಫರ್ ಅಶ್ವಿನಿ ಕೆನಡಿ ಯವರಾದರೆ, ಸಂಗೀತ ಅನೂಪ್ ಅವರದ್ದು.
ಚಿತ್ರದಲ್ಲಿ ಶೇಖರ್ ಎಂಬವರು ಖಳನಟರಾಗಿದ್ದಾರೆ. ಉಳಿದಂತೆ ಹಿರಿಯರಾದ ಅಚ್ಚುತಕುಮಾರ್, ದತ್ತಣ್ಣ, ಸಾಧು ಕೋಕಿಲ, ಮಾಳವಿಕ, ಶೋಭರಾಜ್ ಅಭಿನಯಿಸುತಿದ್ದಾರೆ. ಇದೊಂದು ನೈಜ ಘಟನೆ ಆಧಾರಿತ ಚಿತ್ರ. ಅದನ್ನು ಸಿನೀಮಿಕರಣ ಮಾಡಿಕೊಂಡು ಚಿತ್ರಕತೆ ರಚಿಸಲಾಗಿದೆ. ಚಿತ್ರದಲ್ಲಿ ತನಗೆ ಸವಾಲಿನ ಪಾತ್ರವಿದೆ. ಈವರೆಗೆ ವಿಲನ್ ಆಗಿದ್ದವನು ಇಲ್ಲಿ ಹೀರೋ ಪಾತ್ರ ಮಾಡುತಿದ್ದೇನೆ. ಜನರ ಪ್ರತಿಕ್ರಿಯೆ ಎದುರು ನೋಡುತಿದ್ದೇನೆ ಎಂದು ವಶಿಷ್ಟ ಸಿಂಹ ನುಡಿದರು.