ಅಗ್ನಿಪಥ್ ಸೈನಿಕರು, ಸಾಮಾನ್ಯ ಸೈನಿಕರಿಗೆ ಭಿನ್ನ ವೇತನ ಯಾಕೆ: ಕೇಂದ್ರ ಸರಕಾರಕ್ಕೆ ದಿಲ್ಲಿ ಹೈಕೋರ್ಟ್ ಪ್ರಶ್ನೆ

Update: 2022-12-15 17:48 GMT

ಹೊಸದಿಲ್ಲಿ, ಡಿ. 15: ಅಗ್ನಿಪಥ ಯೋಜನೆಯಲ್ಲಿ ಸೇನೆಗೆ ಆಯ್ಕೆಗೊಂಡವರು ಮತ್ತು ಭಾರತೀಯ ಸೇನೆಯ ನಿಯಮಿತ ಸೈನಿಕರಿಗೆ ಭಿನ್ನ ವೇತನ ಶ್ರೇಣಿ ಯಾಕಿದೆ ಎಂದು ದಿಲ್ಲಿ ಹೈಕೋರ್ಟ್ ಬುಧವಾರ ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ.

‘‘ಕೆಲಸ ಒಂದೇ ಆದರೆ, ಭಿನ್ನ ವೇತನವನ್ನು ನೀವು ಹೇಗೆ ಸಮರ್ಥಿಸುತ್ತೀರಿ?’’ ಎಂದು ಮುಖ್ಯ ನ್ಯಾಯಾಧೀಶ ಸತೀಶ್ ಚಂದ್ರ ಶರ್ಮ ಮತ್ತು ನ್ಯಾ. ಸುಬ್ರಮಣಿಯಮ್ ಪ್ರಸಾದ್ ಅವರನ್ನೊಳಗೊಂಡ ಪೀಠವೊಂದು ಪ್ರಶ್ನಿಸಿತು. ‘‘ಎಲ್ಲವೂ ಕೆಲಸದ ವಿವರಗಳನ್ನು ಅವಲಂಬಿಸಿದೆ. ಈ ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡು ಅಫಿದಾವಿತ್ನಲ್ಲಿ ಸಲ್ಲಿಸಿ’’ ಎಂದು ನ್ಯಾಯಾಲಯ ಕೇಂದ್ರ ಸರಕಾರದ ವಕೀಲರಿಗೆ ಸೂಚಿಸಿತು.

ಜೂನ್ ನಲ್ಲಿ ಜಾರಿಗೊಳಿಸಲಾಗಿರುವ ಅಗ್ನಿಪಥ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ನಡೆಸುತ್ತಿದೆ.

ಅಗ್ನಿಪಥ ಯೋಜನೆಯಲ್ಲಿ 17.5 ಮತ್ತು 21 ವರ್ಷಗಳ ನಡುವಿನ ಭಾರತೀಯ ನಾಗರಿಕರನ್ನು ನಾಲ್ಕು ವರ್ಷಗಳ ಅವಧಿಗಾಗಿ ಭಾರತೀಯ ಸಶಸ್ತ್ರ ಪಡೆಗಳಿಗೆ ನೇಮಕಗೊಳಿಸಲಾಗುತ್ತದೆ. ಅವರ ಪೈಕಿ 25% ಮಂದಿಯನ್ನು ಇನ್ನೂ 15 ವರ್ಷಗಳಿಗಾಗಿ ಸೇನೆಯಲ್ಲೇ ಉಳಿಸಿಕೊಳ್ಳುವ ಅವಕಾಶವೂ ಇದೆ. ಪ್ರತಿಭಟನೆಗಳ ಬಳಿಕ, ಕೇಂದ್ರ ಸರಕಾರವು ಗರಿಷ್ಠ ವಯೋಮಿತಿಯನ್ನು 23 ವರ್ಷಗಳಿಗೆ ವಿಸ್ತರಿಸಿದೆ.

‘ಅಗ್ನಿಪಥ್’ ಯೋಜನೆಯಡಿ ನೇಮಕಗೊಳ್ಳುವ ಅಗ್ನಿವೀರರು ನಿಯಮಿತ ಸೈನಿಕರಿಗಿಂತ ಭಿನ್ನವಾಗಿದ್ದಾರೆ ಎಂದು ಕೇಂದ್ರ ಸರಕಾರದ ಪರವಾಗಿ ಹಾಜರಾಗಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ನ್ಯಾಯಾಲಯದಲ್ಲಿ ಹೇಳಿದರು. ಅಗ್ನಿವೀರರ ಸ್ಥಾನ ಭಾರತೀಯ ಸೇನೆಯ ನಿಯಮಿತ ಸೈನಿಕರಾಗಿ ಸೇನೆಗೆ ಸೇರುವವರಿಗಿಂತ ಕೆಳಗೆ ಎಂದು ಅವರು ತಿಳಿಸಿದರು.

Similar News