×
Ad

ನೂರನೇ ದಿನಕ್ಕೆ ಕಾಲಿಟ್ಟ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆ

Update: 2022-12-16 12:51 IST

ಜೈಪುರ: ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಡೆಸುತ್ತಿರುವ  ಭಾರತ್ ಜೋಡೊ ಯಾತ್ರೆಯು ಶುಕ್ರವಾರ ನೂರನೇ ದಿನಕ್ಕೆ ಕಾಲಿಟ್ಟಿದೆ. ಯಾತ್ರೆಯು ಸದ್ಯ ರಾಜಸ್ಥಾನದಲ್ಲಿ ಸಾಗುತ್ತಿದೆ. ಹಿಮಾಚಲಪ್ರದೇಶದ ನೂತನ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ರಾಹುಲ್ ಜೊತೆಗೆ ಶುಕ್ರವಾರ ಹೆಜ್ಜೆ ಹಾಕಿದ್ದಾರೆ.

ಹಿಮಾಚಲಪ್ರದೇಶದ ಉಪ ಮುಖ್ಯಮಂತ್ರಿ ಮುಕೇಶ್ ಅಗ್ನಿಹೋತ್ರಿ, ರಾಜ್ಯ ಘಟಕದ ಅಧ್ಯಕ್ಷೆ ಪ್ರತಿಭಾ ಸಿಂಗ್, ರಾಜ್ಯದಲ್ಲಿ ಹೊಸದಾಗಿ ಆಯ್ಕೆಯಾಗಿರುವ ಶಾಸಕರು, ಎಐಸಿಸಿ ಉಸ್ತುವಾರಿ ರಾಜೀವ್ ಶುಕ್ಲಾ ಅವರೂ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ.

ಪ್ರಯಾಣದುದ್ದಕ್ಕೂ ದೇಶದ ಸಾಮಾನ್ಯ ಜನರ ಸಮಸ್ಯೆಗಳತ್ತ ಗಮನ ಸೆಳೆದಿದ್ದು, ಭಾರತ್ ಜೋಡೊ ಯಾತ್ರೆಯ ಅತ್ಯಂತ ದೊಡ್ಡ ಯಶಸ್ಸು, ರಾಹುಲ್ ಗಾಂಧಿ ಅವರ ಹೆಸರು ಕೆಡಿಸಲು ಬಿಜೆಪಿಯವರು ಮಾಡಿದ ಪ್ರಯತ್ನಗಳನ್ನು ನಾವು ವಿಫಲಗೊಳಿಸಿದ್ದೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಹೇಳಿದ್ದಾರೆ.

ಸೆ.7  ರಂದು ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆಯು ತಮಿಳುನಾಡು, ಕೇರಳ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ,  ಮಧ್ಯಪ್ರದೇಶದ ಮೂಲಕ ಇದೀಗ ರಾಜಸ್ಥಾನದಲ್ಲಿ ನಡೆಯುತ್ತಿದೆ. ಈವರೆಗೆ ಸುಮಾರು 2800 ಕಿ.,ಮೀ. ಗೂ ಹೆಚ್ಚು ದೂರ ಕ್ರಮಿಸಿದೆ,. ಡಿ.24ರಂದು ದಿಲ್ಲಿಗೆ ತಲುಪಲಿದೆ. 8 ದಿನಗಳ ವಿರಾಮದ ಬಳಿಕ ಉತ್ತರಪ್ರದೇಶ,  ಹರ್ಯಾಣ, ಪಂಜಾಬ್ ಹಾಗೂ ಅಂತಿಮವಾಗಿ ಜಮ್ಮು-ಕಾಶ್ಮೀರದತ್ತ ಹೊರಡಲಿದೆ.

ಭಾರತ್ ಜೋಡೊ  ಯಾತ್ರೆಯ 100 ದಿನಗಳ ಸಂಭ್ರಮಾಚರಣೆಯಲ್ಲಿ, ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಖಾತೆಯು ಅದರ ಡಿಸ್ ಪ್ಲೇ ಚಿತ್ರವನ್ನು (ಡಿಪಿ) “100 ದಿನಗಳ ಯಾತ್ರೆ’’ ಎಂದು  ಬದಲಾಯಿಸಿದೆ.

Similar News