ಮೋದಿ ಸರ್ಕಾರ ಬಿಡಾಡಿ ದನಗಳ ಉಪಟಳ ಸಮಸ್ಯೆ ಬಗೆಹರಿಸಿಲ್ಲ: ಉತ್ತರ ಪ್ರದೇಶ ರೈತರ ಆಕ್ರೋಶ

Update: 2022-12-16 10:23 GMT

ಲಕ್ನೊ: ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಹಾಗೂ ಆದಿತ್ಯ ನಾಥ್ ನೇತೃತ್ವದ ರಾಜ್ಯ ಸರ್ಕಾರಗಳೆರಡೂ ಬಿಡಾಡಿ ದನಗಳ ಉಪಟಳ ಸಮಸ್ಯೆ ಬಗೆಹರಿಸುವುದಾಗಿ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ ಎಂದು ಮೂರು ಕೃಷಿ ಕಾಯ್ದೆ ರದ್ದುಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತೀಯ ರೈತ ಸಂಘಟನೆ ಸೇರಿದಂತೆ ಹಲವಾರು ರೈತ ಸಂಘಟನೆಗಳು ಆರೋಪಿಸಿವೆ. ಈ ಸಮಸ್ಯೆ ಬಗೆಹರಿಸದಿದ್ದರೆ ಮತ್ತೊಮ್ಮೆ ಚಳವಳಿ ನಡೆಸುವುದಾಗಿ ರೈತರು ಬೆದರಿಕೆಯೊಡ್ಡಿದ್ದಾರೆ ಎಂದು newsclick.in ವರದಿ ಮಾಡಿದೆ. ಈ ಕುರಿತು newsclick ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಅಖಿಲ ಭಾರತ ರೈತ ಸಭಾದ ಉತ್ತರ ಪ್ರದೇಶ ಪ್ರಧಾನ ಕಾರ್ಯದರ್ಶಿ ಮುಕುಟ್ ಸಿಂಗ್, ಸರ್ಕಾರವು ಬಿಡಾಡಿ ದನಗಳ ಉಪಟಳ ತಪ್ಪಿಸುವತ್ತ ಯಾವುದೇ ಗಮನ ನೀಡುತ್ತಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ. ಬಿಡಾಡಿ ದನಗಳು ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಮೌಲ್ಯದ ಆಲೂಗಡ್ಡೆ, ಗೋಧಿ, ಬಾರ್ಲಿ, ತರಕಾರಿ ಹಾಗೂ ಸಾಸಿವೆ ಬೆಳೆಗಳನ್ನು ನಾಶಗೊಳಿಸುತ್ತಿವೆ. ಬಿಡಾಡಿ ದನಗಳ ಉಪಟಳವನ್ನು ಬಗೆಹರಿಸುವುದಾಗಿ ನೀಡಿದ್ದ ಭರವಸೆಯಿಂದ ಬಿಜೆಪಿ ಹಿಂದೆ ಸರಿದಿದೆ ಎಂದು ಆರೋಪಿಸಿದ್ದಾರೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಡಾಡಿ ದನಗಳ ಉಪಟಳ ಸಮಸ್ಯೆಯನ್ನು ಪ್ರಸ್ತಾಪಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಮಾರ್ಚ್ 10(ಫಲಿತಾಂಶದ ದಿನ)ರ ನಂತರ ಸಮಸ್ಯೆಯನ್ನು ಬಗೆಹರಿಸಲು ಹೊಸ ನೀತಿಯನ್ನು ಜಾರಿಗೊಳಿಸಲಾಗುವುದು ಎಂದು ಬಹ್ರೈಚ್‌ ಚುನಾವಣಾ ಪ್ರಚಾರದಲ್ಲಿ ಭರವಸೆ ನೀಡಿದ್ದರು. "ಪ್ರಧಾನಿ ಮೋದಿ ಮಾರ್ಚ್ ತಿಂಗಳಲ್ಲೇ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದರೂ ಈವರೆಗೆ ಅದಕ್ಕಾಗಿ ಯಾವುದೇ ದೃಢ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ. ಬಿಡಾಡಿ ದನಗಳು ಗೋಧಿ, ಬೇಳೆಕಾಳುಗಳು, ಸಾಸಿವೆ ಬೆಳೆಗಳನ್ನು ನಾಶಗೊಳಿಸುತ್ತಿವೆ. ಈ ಸಮಸ್ಯೆಯನ್ನು ಬಗೆಹರಿಸಲು ಸ್ಥಳೀಯ ಆಡಳಿತದ ಬಳಿ ಯಾವುದೇ ಶಾಶ್ವತ ಪರಿಹಾರವಿಲ್ಲ. ಪ್ರಧಾನಿ ಮೋದಿ ಕೇವಲ ಬಾಯುಪಚಾರದ ಮಾತಾಡುತ್ತಾರೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಗೋಶಾಲೆಗಳನ್ನು ನಡೆಸಲಾಗುತ್ತಿದೆ. ಕಳವಳಕಾರಿ ಮತ್ತು ಕರುಣಾಜನಕ ಸಂಗತಿಯೆಂದರೆ ಈ ಬಿಡಾಡಿ ದನಗಳು ಗೋಶಾಲೆಗಳಲ್ಲಿ ಆಹಾರವಿಲ್ಲದೆ ಹಸಿವಿನಿಂದ ಸಾಯುತ್ತಿವೆ. ಸರ್ಕಾರವು ನಿರ್ದಿಷ್ಟ ಮೊತ್ತದ ಹಣವನ್ನು ರೈತರಿಗೇ ನೀಡಿ ಅವರೇ ಸ್ವಯಂ ಗೋಶಾಲೆಗಳನ್ನು ನಿರ್ಮಿಸಿಕೊಳ್ಳಲು ನೆರವು ನೀಡಿದರೆ ಮಾತ್ರ ಬಿಡಾಡಿ ದನಗಳ ಉಪಟಳ ಸಮಸ್ಯೆಯನ್ನು ಬಗೆಹರಿಸಬಹುದಾಗಿದೆ" ಎಂದು ಭಾರತೀಯ ರೈತ ಸಂಘಟನೆಯ ನಾಯಕ ರಾಕೇಶ್ ಟಿಕಾಯತ್ ಅಭಿಪ್ರಾಯ ಪಡುತ್ತಾರೆ. ಕಳೆದ ಬಾರಿಯ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಡಾಡಿ ದನಗಳ ಉಪಟಳ ಸಮಸ್ಯೆಯಿಂದ ತೀವ್ರ ಅಸಮಾಧಾನಗೊಂಡಿದ್ದ ರೈತರನ್ನು ಸಮಾಧಾನಿಸಲು ಪ್ರಧಾನಿ ನರೇಂದ್ರ ಮೋದಿಯವರು ಬಿಡಾಡಿ ದನಗಳ ಉಪಟಳ ಸಮಸ್ಯೆ ಪರಿಹರಿಸಲು ಫಲಿತಾಂಶದ ನೂತನ ನೀತಿ ಜಾರಿಗೊಳಿಸಲಾಗುವುದು ಎಂದು ರೈತರಿಗೆ ಭರವಸೆ ನೀಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

Similar News