ಸುನೀಲ್ ಕುಮಾರ್‌ ಸೋಲುವ ಭೀತಿಯಲ್ಲಿ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣ ದಾಖಲು: ಪ್ರಮೋದ್ ಮುತಾಲಿಕ್ ಆರೋಪ

Update: 2022-12-17 14:42 GMT

ಉಡುಪಿ: ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ನಾನು ಕಾರ್ಕಳ ಕ್ಷೇತ್ರದಲ್ಲಿ ಓಡಾಟ ನಡೆಸುತ್ತಿರುವುದು ಅಲ್ಲಿನ ಶಾಸಕ ಸುನೀಲ್ ಕುಮಾರ್‌ಗೆ ಸಹ್ಯವಾಗುತ್ತಿಲ್ಲ. ಅದಕ್ಕಾಗಿ ಕಾರ್ಯಕರ್ತರ ಮೇಲೆ ಕೇಸು ಹಾಕಿ ಹೆದರಿಸುತ್ತಿದ್ದಾರೆ. ಇದು ಅವರಿಗೆ ಶೋಭೆ ತರಲ್ಲ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಹೆದರಿದ್ದಾರೆ. ಹಿಂದುತ್ವ ನೈತಿಕತೆ ಇದ್ದರೆ ಅವರಿಗೆ ಹೆದರಿಸುವ ಅವಶ್ಯಕತೆ ಇರಲಿಲ್ಲ. ನಮ್ಮ ಕಾರ್ಯಕರ್ತರ ಮೇಲೆ ಕೊಲೆ ಕೇಸುಗಳನ್ನು ಕೂಡ ಹಾಕುತ್ತಿದ್ದಾರೆ. ಈ ಮೂಲಕ ಸುನೀಲ್ ಕುಮಾರ್ ಚುನಾವಣೆಗೂ ಮೊದಲೇ ಸೋಲನ್ನು ಒಪ್ಪಿಕೊಳ್ಳುತ್ತಿದ್ದಾರೆ ಎಂದರು.

ಕಾಂಗ್ರೆಸ್ ಅವತ್ತು ಮಾಡಿದ್ದನು ಇವತ್ತು ಬಿಜೆಪಿಯವರು ಮಾಡುತ್ತಿದ್ದಾರೆ.  ಮುಂದಿನ ದಿನಗಳಲ್ಲಿ ಸುನೀಲ್ ಕುಮಾರ್ ಸೋಲು ಗ್ಯಾರೆಂಟಿ. ರಾಜ್ಯದಲ್ಲಿ ಮೂರು ಸಾವಿರ ಹಿಂದೂ ಕಾರ್ಯಕರ್ತರ ಮೇಲೆ ಕೇಸು ಇದೆ. ಇಡೀ ರಾಜ್ಯದಲ್ಲಿ 18 ಹಿಂದು ಸಂಘಟನೆಗಳ ಒಕ್ಕೂಟ ಬಿಜೆಪಿಗೆ ವಿರುದ್ಧ ನಿಲ್ಲಲಿದೆ ಎಂದು ಅವರು ಹೇಳಿದರು.

ಕಾರ್ಕಳದ ಭ್ರಷ್ಟಾಚಾರಗಳ ಬಗ್ಗೆ ನಮ್ಮಲ್ಲಿ ದಾಖಲೆ ಇದೆ. ಒಂದೊಂದಾಗಿ ಬಹಿರಂಗ ಪಡಿಸುತ್ತೇವೆ. ಸುನೀಲ್ ಕುಮಾರ್ ಈಗಲೇ ಸೋಲು ಒಪ್ಪಿ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ. ಸುನೀಲ್ ಕುಮಾರ್‌ಗೆ ಅಧಿಕಾರದ ದುಡ್ಡಿನ ಅಹಂಕಾರ ಸೊಕ್ಕು ಬಂದಿದೆ ಕಾರ್ಯಕರ್ತರ ಮೇಲೆ ಕೇಸು ಹಾಕಿ ಭಯಪಡಿಸುವ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.‌

ಸುದ್ದಿಗೋಷ್ಠಿಯಲ್ಲಿ ಶ್ರೀರಾಮಸೇನೆ ಮುಖಂಡರಾದ ಗಂಗಾಧರ ಕುಲಕರ್ಣಿ, ಹರೀಶ್ ಅಧಿಕಾರಿ, ಜಯರಾಮ ಅಂಬೇಕಲ್ಲು, ಆನಂದ ಶೆಟ್ಟಿ ಹಾಜರಿದ್ದರು.

"ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಹಿಂದುತ್ವಕ್ಕಾಗಿ ಸ್ಪರ್ಧಿ ಸುತ್ತೇನೆ. ಹಿಂದೂ ವಿಚಾರಧಾರೆ ಕಡೆಗಣಿಸಲಾಗಿದೆ. ಈ ನಿಟ್ಟಿನಲ್ಲಿ ಕಾರ್ಯ ಕರ್ತರಿಗೆ ಶಕ್ತಿ ತುಂಬಲು ಈ ಸ್ಪರ್ಧಿಸುತ್ತಿದ್ದೇನೆ. ಕಾರ್ಕಳ ಸೇರಿದಂತೆ ರಾಜ್ಯದ ಏಳೆಂಟು ಕ್ಷೇತ್ರದಲ್ಲಿ ಅಧ್ಯಯನ ಮಾಡಿದ್ದೇನೆ. ಈ ತಿಂಗಳ ಕೊನೆಗೆ ಅಧಿಕೃತವಾಗಿ ಘೋಷಣೆ ಮಾಡುತ್ತೇನೆ".

-ಪ್ರಮೋದ್ ಮುತಾಲಿಕ್

Similar News