ಯೋಗೀಂದ್ರ ಮರವಂತೆಯವರ ‘ನನ್ನ ಕಿಟಕಿ’ ಕೃತಿ ಅನಾವರಣ
ಉಡುಪಿ, ಡಿ.17: ಜೀವನದ ಅವ್ಯವಸ್ಥೆಯನ್ನು ವ್ಯವಸ್ಥೆಗೆ ಒಳಪಡಿಸೋದೇ ಸಾಹಿತ್ಯದ ಗುಣ ಎಂದು ಖ್ಯಾತ ಸಾಹಿತಿ, ಕತೆಗಾರ, ವಿಮರ್ಶಕ ಎಸ್. ದಿವಾಕರ್ ಹೇಳಿದ್ದಾರೆ.
ಉಡುಪಿಯ ಸುಹಾಸಂ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ವತಿಯಿಂದ ಯೋಗೀಂದ್ರ ಮರವಂತೆ ಅವರ ‘ನನ್ನ ಕಿಟಕಿ’ ಕೃತಿಯನ್ನು ಕಿದಿಯೂರು ಹೋಟೆಲಿನ ಪವನ್ ರೂಫ್ ಟಾಪ್ ನಲ್ಲಿ ಶನಿವಾರ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು. ಅಹಂ ಇಲ್ಲದಿದ್ದರೆ ನೀತಿ ಬೋಧನೆ ಸಾಧ್ಯವಿಲ್ಲ. ಜೀವನದ ಜಿಜ್ಞಾಸೆಯನ್ನು ಕಿಟಕಿಯ ಚೌಕಟ್ಟಿನ ಮೂಲಕ ನೋಡೋದೇ ಚಂದ ಎಂದರು.
ಲೇಖಕಿ ಜಯಶ್ರೀ ಕಾಸರವಳ್ಳಿ ಮಾತನಾಡಿ, ಹೊರ ಊರಲ್ಲಿ ಪರಕೀಯ ಪ್ರಜ್ಞೆ ಕಾಡೋದು ಸಹಜ. ದ್ವಂದ್ವ, ಜಿಜ್ಞಾಸೆಯ ನಡುವೆ ಅಸ್ಮಿತೆಯ ಪ್ರಶ್ನೆ ಎದುರಾಗುತ್ತದೆ. ಒಳ-ಹೊರ ಜಗತ್ತಿನ ಮುಖಾಮುಖಿ ನಡುವೆ ನಮ್ಮೊಳಗಿನ ಜಗತ್ತನ್ನು ಕಾಣಬೇಕು ಎಂದರು.
ಬಹುಭಾಷಾ ಕತೆಗಾರ್ತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಪುಸ್ತಕವನ್ನು ಪರಿಚಯಿಸಿದರು. ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ., ಕೃತಿಕಾರ ಯೋಗೀಂದ್ರ ಮರವಂತೆ, ಜನಾರ್ದನ ಮರವಂತೆ, ಸುಹಾಸಂ ಕಾರ್ಯದರ್ಶಿ ಎಚ್.ಗೋಪಾಲ ಭಟ್ ಉಪಸ್ಥಿತರಿದ್ದರು.
ಸುಹಾಸಂ ಅಧ್ಯಕ್ಷ ಎಚ್.ಶಾಂತರಾಜ್ ಐತಾಳ್ ಸ್ವಾಗತಿಸಿದರು. ಪ್ರತಿಭಾ ಆಚಾರ್ಯ ಪ್ರಾರ್ಥಿಸಿ ಶ್ರೀನಿವಾಸ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು.