ಸೇನಾ ಶಿಬಿರದ ಬಳಿ ಗುಂಡಿನ ದಾಳಿಗೆ ಇಬ್ಬರ ಸಾವು; ಭಯೋತ್ಪಾದಕ ಕೃತ್ಯವೆಂದ ಸೇನೆ; ಜನರಿಂದ ಬೃಹತ್ ಪ್ರತಿಭಟನೆ

Update: 2022-12-17 15:09 GMT

ಶ್ರೀನಗರ: ರಜೌರಿಯಲ್ಲಿರುವ ಸೇನಾ ಶಿಬಿರವೊಂದರ ಹೊರಗೆ ಇಬ್ಬರು ನಾಗರಿಕರು ಶುಕ್ರವಾರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಹತ್ಯೆಯ ಬೆನ್ನಿಗೇ ಜನರ ಆಕ್ರೋಶ ಭುಗಿಲೆದ್ದಿದ್ದು, ಬೃಹತ್ ಪ್ರತಿಭಟನೆಗಳು ನಡೆದಿವೆ. ಸೈನಿಕರೇ ಈ ಕೊಲೆಗಳನ್ನು ನಡೆಸಿದ್ದಾರೆ ಎಂಬುದಾಗಿ ಆರೋಪಿಸಿರುವ ಪ್ರತಿಭಟನಾಕಾರರು ಸೇನಾ ಶಿಬಿರದತ್ತ ಕಲ್ಲುಗಳನ್ನು ಎಸೆದಿದ್ದಾರೆ.

ಮೃತರನ್ನು ಸುರೀಂದರ್ ಕುಮಾರ್ ಮತ್ತು ಕಮಲ್ ಕಿಶೋರ್ ಎಂಬುದಾಗಿ ಗುರುತಿಸಲಾಗಿದೆ ಎಂದು ಸೇನೆ ಹೇಳಿದೆ. ಘಟನೆಯಲ್ಲಿ, ಉತ್ತರಾಖಂಡದ ಅನಿಲ್ ಕುಮಾರ್ ಎಂಬ ವ್ಯಕ್ತಿ ಗಾಯಗೊಂಡಿದ್ದಾರೆ. ಮೃತರು ಮತ್ತು ಗಾಯಗೊಂಡವರು ಸೇನಾ ಶಿಬಿರದಲ್ಲೇ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅವರು ಶಿಬಿರದತ್ತ ಬರುತ್ತಿದ್ದಾಗ ಅವರ ಮೇಲೆ ಗುಂಡು ಹಾರಿಸಲಾಗಿದೆ ಎನ್ನಲಾಗಿದೆ.

ಇಬ್ಬರೂ ನಾಗರಿಕರು ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಸೇನೆ ಹೇಳಿಕೊಂಡಿದೆ. ‘ರಜೌರಿಯ ಸೇನಾ ಆಸ್ಪತ್ರೆಯ ಸಮೀಪ ಮುಂಜಾನೆಯ ಅವಧಿಯಲ್ಲಿ ಅಜ್ಞಾತ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ. ಪೊಲೀಸರು, ಭದ್ರತಾ ಪಡೆಗಳು ಮತ್ತು ನಾಗರಿಕ ಆಡಳಿತದ ಅಧಿಕಾರಿಗಳು ಸ್ಥಳದಲ್ಲಿದ್ದಾರೆ’ ಎಂಬುದಾಗಿ ಸೇನಾಧಿಕಾರಿಗಳು ಹೇಳಿದ್ದಾರೆ. ಆದರೆ, ನೂರಾರು ಪ್ರತಿಭಟನಾಕಾರರು ಜಮ್ಮು-ಪೂಂಚ್ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು, ಸೇನಾ ಕಾವಲುಗಾರರೇ ನಾಗರಿಕರನ್ನು ಕೊಲೆಗೈದಿದ್ದಾರೆ ಎಂದು ಆರೋಪಿಸಿದ್ದಾರೆ ಹಾಗೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ನ್ಯಾಯೋಚಿತ ತನಿಖೆ: ಪೊಲೀಸರ ಭರವಸೆ

ರಜೌರಿಯಲ್ಲಿರುವ ಸೇನಾ ಶಿಬಿರದ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟ ಘಟನೆಯ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಹಾಗೂ ನ್ಯಾಯೋಚಿತ ತನಿಖೆ ನಡೆಸುವುದಾಗಿ ಹೇಳಿಕೊಂಡಿದ್ದಾರೆ. ಪೊಲೀಸರ ತನಿಖೆಗೆ ಸಹಕರಿಸುವುದಾಗಿ ಸೇನೆಯೂ ಹೇಳಿಕೊಂಡಿದೆ.

‘ಪ್ರಕರಣಕ್ಕೆ ಸಂಬಂಧಿಸಿ ಮೊದಲ ಮಾಹಿತಿ ವರದಿ (ಎಫ್ಐಆರ್)ಯನ್ನು ದಾಖಲಿಸಲಾಗಿದೆ. ಕೂಲಂಕುಷ ತನಿಖೆಯನ್ನು ನಡೆಸಲಾಗುವುದು. ತನಿಖೆಯಲ್ಲಿ ಕಂಡುಬರುವ ಯಾವುದೇ ಸಂಗತಿಯ ಬಗ್ಗೆ ಮಾಹಿತಿ ನೀಡಲಾಗುವುದು. ಘಟನೆಯ ಬಗ್ಗೆ ನ್ಯಾಯೋಚಿತ ತನಿಖೆ ನಡೆಸಲಾಗುವುದು ಎಂಬ ಭರವಸೆಯನ್ನು ನಾವು ಜನರಿಗೆ ನೀಡುತ್ತೇವೆ’ಎಂದು ರಜೌರಿ-ಪೂಂಚ್ ವಲಯದ ಪೊಲೀಸ್ ಡಿಐಜಿ ಹಸೀಬ್ ಮುಗಲ್ ಹೇಳಿದರು.

ಕೋರ್ಟ್ ಆಫ್ ಇನ್ಕ್ವಯರಿ ಆಗಲಿ: ಬಿಜೆಪಿ ಒತ್ತಾಯ

ನಾಗರಿಕರ ಹತ್ಯೆಗಳ ಬಗ್ಗೆ ತನಿಖೆಯಾಗಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರವೀಂದ್ರ ರೈನಾ ಒತ್ತಾಯಿಸಿದ್ದಾರೆ. ಸೇನೆಯು ಅತ್ಯುನ್ನತ ಮಾನದಂಡಗಳನ್ನು ಅನುಸರಿಸುವುದು ಹಾಗೂ ಅದರ ಪ್ರಕಾರ ಆರೋಪಗಳಿಗೆ ಸ್ಪಂದಿಸುವುದು ಎಂದು ನಾನು ನಿರೀಕ್ಷಿಸುತ್ತೇನೆ ಎಂದು ಅವರು ಹೇಳಿದರು.

‘ಹಿಂದೆ, ಶೋಪಿಯನ್ನಲ್ಲಿ ಕೆಲವು ನಾಗರಿಕರ ಹತ್ಯೆ ನಡೆದಾಗ ಸೇನೆಯು ಕೋರ್ಟ್ ಆಫ್ ಇನ್ಕ್ವಯರಿ (ಸೇನಾ ವಿಚಾರಣೆ) ನಡೆಸಿತ್ತು ಹಾಗೂ ಹತ್ಯೆಯಲ್ಲಿ ಭಾಗಿಯಾದವರನ್ನು ತರಾಟೆಗೆ ತೆಗೆದುಕೊಂಡಿತ್ತು’ ಎಂದು ರೈನಾ ಹೇಳಿದರು. 
‘ಈ ಘಟನೆಯ ಬಗ್ಗೆಯೂ ಸೇನೆಯ ಉತ್ತರದ ಕಮಾಂಡ್ ತನ್ನದೇ ಆದ ಕೋರ್ಟ್ ಆಫ್ ಇನ್ಕ್ವಯರಿ ನಡೆಸುವುದು ಎಂದು ನಾನು ಭಾವಿಸುತ್ತೇನೆ. ನನಗೆ ಸೇನೆಯ ಬಗ್ಗೆ ಪೂರ್ಣ ವಿಶ್ವಾಸವಿದೆ’ ಎಂದು ಅವರು ಹೇಳಿದರು.

Similar News