ʼಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಗದಿದ್ದರೆ ಇನ್ನೆಲ್ಲಿ ಹೋಗಬೇಕು?ʼ: ದಿಲ್ಲಿ ಮಹಿಳಾ ಆಯೋಗದ ಮುಖ್ಯಸ್ಥೆ ಪ್ರಶ್ನೆ
ಬಿಲ್ಕಿಸ್ ಬಾನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯದ ಕ್ರಮಕ್ಕೆ ಸ್ವಾತಿ ಮಲಿವಾಲ್ ಕಳವಳ
ಹೊಸದಿಲ್ಲಿ: ಜನರಿಗೆ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯ ಸಿಗದಿದ್ದರೆ ಅವರು ಎಲ್ಲಿ ಹೋಗಬೇಕು ಎಂದು ದಿಲ್ಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಶನಿವಾರ ಪ್ರಶ್ನಿಸಿದ್ದಾರೆ.
ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಹಾಗೂ ತನ್ನ ಕುಟುಂಬದ ಏಳು ಸದಸ್ಯರನ್ನು ಕೊಲೆಗೈದ 11 ದೋಷಿಗಳನ್ನು ಗುಜರಾತ್ ಸರಕಾರ ಜೈಲಿನಿಂದ ಬಿಡುಗಡೆಗೊಳಿಸಲು ಕಾರಣವಾದ ತೀರ್ಪೊಂದನ್ನು ಮರುಪರಿಶೀಲಿಸಬೇಕೆಂದು ಕೋರಿ ಬಿಲ್ಕಿಸ್ ಬಾನು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಬಳಿಕ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
‘ಬಿಲ್ಕಿಸ್ ಬಾನು ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. 21 ವರ್ಷದ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು ಹಾಗೂ ಅವರ ಮೂರು ವರ್ಷದ ಮಗ ಮತ್ತು ಆರು ಮಂದಿ ಕುಟುಂಬ ಸದಸ್ಯರನ್ನು ಕೊಲ್ಲಲಾಗಿತ್ತು. ಆದರೆ, ಗುಜರಾತ್ ಸರಕಾರ ಎಲ್ಲಾ ಅತ್ಯಾಚಾರಿಗಳು ಹಾಗೂ ಕೊಲೆಗಡುಕರನ್ನು ಬಿಡುಗಡೆಗೊಳಿಸಿದೆ. ಸುಪ್ರೀಂ ಕೋರ್ಟಿನಲ್ಲೇ ನ್ಯಾಯ ಸಿಗದಿದ್ದರೆ ಜನರು ಇನ್ನೆಲ್ಲಿ ಹೋಗಬೇಕು’ ಎಂದು ಮಲಿವಾಲ್ ಟ್ವಿಟರ್ ನಲ್ಲಿ ಪ್ರಶ್ನಿಸಿದ್ದಾರೆ.