ನ್ಯಾಯಾಧೀಶರು, ಪತ್ರಕರ್ತರ ಸ್ವಾತಂತ್ರ್ಯ ಕುಂದಿದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆ: ನ್ಯಾ.ಬಿ.ಎನ್.ಶ್ರೀಕೃಷ್ಣ
ಮುಂಬೈ: ನ್ಯಾಯಾಧೀಶರು ಮತ್ತು ಪತ್ರಕರ್ತರ ಸ್ವಾತಂತ್ರ್ಯ ಕುಂದಿದರೆ ಪ್ರಜಾಪ್ರಭುತ್ವ ತೊಂದರೆಗೆ ಸಿಲುಕುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಬಿ.ಎನ್.ಶ್ರೀಕೃಷ್ಣ ಅವರು ಹೇಳಿದ್ದಾರೆ.
ಶುಕ್ರವಾರ ಮುಂಬೈ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕೋದ್ಯಮದಲ್ಲಿ ಶ್ರೇಷ್ಠತೆಗಾಗಿ ವಾರ್ಷಿಕ ರೆಡ್ಇಂಕ್ ಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ʼನ್ಯಾಯಾಧೀಶರು ಮತ್ತು ಪತ್ರಕರ್ತರು, ಈ ಎರಡು ವೃತ್ತಿಗಳು ಸ್ವತಂತ್ರವಾಗಿರುವುದು ಅಗತ್ಯವಾಗಿದೆ. ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡ ಪತ್ರಕರ್ತ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡ ನ್ಯಾಯಾಧೀಶನಷ್ಟೇ ಕೆಟ್ಟವನಾಗುತ್ತಾನೆʼ ಎಂದು ಹೇಳಿದರು.
‘ಪತ್ರಿಕಾರಂಗವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿದೆ ಮತ್ತು ಪತ್ರಿಕೋದ್ಯಮವು ಪ್ರಾಮಾಣಿಕತೆಯು ನಿಜಕ್ಕೂ ಅತ್ಯುತ್ತಮ ನೀತಿಯಾಗಿರುವ ವೃತ್ತಿಯಾಗಿದೆ. ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗದ ಜೊತೆಗೆ ಪತ್ರಿಕಾರಂಗವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿದೆ ಎನ್ನುವುದು ನಮಗೆಲ್ಲರಿಗೂ ತಿಳಿದಿದೆ. ಮೊದಲ ಮೂವರು ಎಡವಿದರೆ ಅವರನ್ನು ಸರಿದಾರಿಗೆ ತರುವುದು ನಾಲ್ಕನೇ ಸ್ತಂಭದ ಕರ್ತವ್ಯವಾಗಿದೆ’ ಎಂದರು.
ಈ ವರ್ಷದ ಮುಂಬೈ ಪ್ರೆಸ್ ಕ್ಲಬ್ ನ ‘ವರ್ಷದ ಪತ್ರಕರ್ತ ’ ಪ್ರಶಸ್ತಿಯನ್ನು 2021ರಲ್ಲಿ ಉತ್ತರ ಪ್ರದೇಶದಲ್ಲಿ ಕೋವಿಡ್ ಸಾವುಗಳ ಕುರಿತು ವರದಿಗಾರಿಕೆಗಾಗಿ ʼದೈನಿಕ ಭಾಸ್ಕರ್ʼ ರಾಷ್ಟ್ರೀಯ ಸಂಪಾದಕ ಓಂ ಗೌರ್ ಅವರು ಪಡೆದುಕೊಂಡರೆ, ಜೀವಿತಾವಧಿ ಸಾಧನೆ ಪ್ರಶಸ್ತಿಗೆ ಪತ್ರಕರ್ತ ಟಿಜೆಎಸ್ ಜಾರ್ಜ್ ಭಾಜನರಾಗಿದ್ದಾರೆ.