×
Ad

ಕೆಲವು ತಪ್ಪುಗಳನ್ನು ಅಪರಾಧಮುಕ್ತಗೊಳಿಸಲು ಜಿಎಸ್ಟಿ ಮಂಡಳಿ ಒಪ್ಪಿಗೆ

Update: 2022-12-17 22:03 IST

ಹೊಸದಿಲ್ಲಿ: ಕೆಲವು ತಪ್ಪುಗಳನ್ನು ಅಪರಾಧಮುಕ್ತಗೊಳಿಸಲು ಶನಿವಾರ ಒಪ್ಪಿಕೊಂಡಿರುವ ಜಿಎಸ್ಟಿ ಮಂಡಳಿಯು, ಕಾನೂನುಕ್ರಮದ ಮಿತಿಯನ್ನು ಎರಡು ಕೋ.ರೂ.ಗಳಿಗೆ ದ್ವಿಗುಣಗೊಳಿಸಿದೆ ಎಂದು ಕಂದಾಯ ಕಾರ್ಯದರ್ಶಿ ಸಂಜಯ ಮಲ್ಹೋತ್ರಾ ಅವರು ಇಲ್ಲಿ ತಿಳಿಸಿದರು.

ಸಮಯಾಭಾವದಿಂದಾಗಿ ಅಜೆಂಡಾದಲ್ಲಿದ್ದ 15 ವಿಷಯಗಳ ಪೈಕಿ ಕೇವಲ ಎಂಟರ ಕುರಿತು ನಿರ್ಧರಿಸಲು ಮಂಡಳಿಗೆ ಸಾಧ್ಯವಾಯಿತು ಎಂದು ಹೇಳಿದ ಮಂಡಳಿಯ ಅಧ್ಯಕ್ಷೆಯೂ ಆಗಿರುವ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು,ಪರಿಶೀಲಿಸಲಾಗದ ವಿಷಯಗಳಲ್ಲಿ ಜಿಎಸ್ಟಿಗಾಗಿ ಮೇಲ್ಮನವಿ ನ್ಯಾಯಾಧಿಕರಣ ಸ್ಥಾಪನೆಯು ಸೇರಿದೆ ಎಂದು ತಿಳಿಸಿದರು.

ಪಾನ್ ಮಸಾಲಾ ಮತ್ತು ಗುಟ್ಕಾ ವ್ಯವಹಾರದಲ್ಲಿ ತೆರಿಗೆ ವಂಚನೆಯನ್ನು ತಡೆಯಲು ಕಾರ್ಯವಿಧಾನಗಳ ಬಗ್ಗೆಯೂ ಚರ್ಚಿಸಲಾಗಿಲ್ಲ. ಯಾವುದೇ ಹೊಸ ತೆರಿಗೆಗಳನ್ನು ತರಲಾಗಿಲ್ಲ ಎಂದು ಜಿಎಸ್ಟಿ ಮಂಡಳಿಯ 48 ನೇ ಸಭೆಯಲ್ಲಿ ಸೀತಾರಾಮನ್ ತಿಳಿಸಿದರು. ಸ್ಪೋಟ್ಸ್ ಯುಟಿಲಿಟಿ ವೆಹಿಕಲ್ (ಎಸ್ಯುವಿ) ಎಂದರೇನು ಮತ್ತು ಇಂತಹ ವರ್ಗಗಳ ವಾಹನಗಳಿಗೆ ಅನ್ವಯಿಸುವ ತೆರಿಗೆ ಕುರಿತು ಮಂಡಳಿಯು ಸ್ಪಷ್ಟಪಡಿಸಿದೆ ಎಂದೂ ಅವರು ಹೇಳಿದರು.

ಆನ್ಲೈನ್ ಗೇಮಿಂಗ್ ಮತ್ತು ಕ್ಯಾಸಿನೋಗಳ ಕುರಿತು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅಧ್ಯಕ್ಷತೆಯ ಸಮಿತಿಯು ಎರಡು ದಿನಗಳ ಹಿಂದಷ್ಟೇ ತನ್ನ ವರದಿಯನ್ನು ಸಲ್ಲಿಸಿರುವುದರಿಂದ ಅವುಗಳ ಮೇಲಿನ ಜಿಎಸ್ಟಿ ಕುರಿತು ಚರ್ಚಿಸಲಾಗಲಿಲ್ಲ ಎಂದು ಹೇಳಿದ ಮಲ್ಹೋತ್ರಾ,ಸಮಿತಿಯ ವರದಿಯನ್ನು ಜಿಎಸ್ಟಿ ಮಂಡಳಿಯ ಸದಸ್ಯರಿಗೆ ವಿತರಿಸಲೂ ಸಾಧ್ಯವಾಗಿರಲಿಲ್ಲ ಎಂದರು.

ಕಾನೂನು ಕ್ರಮಕ್ಕಾಗಿ ಈಗಿನ ಒಂದು ಕೋ.ರೂ.ಗಳ ಮಿತಿಯನ್ನು ಎರಡು ಕೋ.ರೂ.ಗಳಿಗೆ ಹೆಚ್ಚಿಸಲಾಗಿದೆ ಮತ್ತು ಬೇಳೆಕಾಳುಗಳ ಸಿಪ್ಪೆಯ ಮೇಲಿನ ಜಿಎಸ್ಟಿಯನ್ನು ಶೇ.5ರಿಂದ ಶೂನ್ಯಕ್ಕೆ ತಗ್ಗಿಸಲಾಗಿದೆ ಎಂದೂ ಅವರು ತಿಳಿಸಿದರು.

Similar News