ಫಿಫಾ ವಿಶ್ವಕಪ್: ಮೊರೊಕ್ಕೊ ವಿರುದ್ಧ ಜಯ, ಕ್ರೊಯೇಶಿಯಕ್ಕೆ ಮೂರನೇ ಸ್ಥಾನ

Update: 2022-12-17 17:04 GMT

 ದೋಹಾ, ಡಿ.17: ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪ್ಲೇ ಆಫ್ ಪಂದ್ಯದಲ್ಲಿ ಕ್ರೊಯೇಶಿಯ ತಂಡ ಮೊರೊಕ್ಕೊ ತಂಡವನ್ನು 2-1 ಅಂತರದಿಂದ ರೋಚಕವಾಗಿ ಮಣಿಸಿದೆ. ಇದರೊಂದಿಗೆ 3ನೇ ಸ್ಥಾನ ಪಡೆದುಕೊಂಡಿದೆ.

ಕ್ರೊಯೇಶಿಯ ವಿಶ್ವಕಪ್‌ನಲ್ಲಿ 2ನೇ ಬಾರಿ ಮೂರನೇ ಸ್ಥಾನ ಪಡೆದಿದೆ. 1998ರ ವಿಶ್ವಕಪ್‌ನಲ್ಲಿ ಕೂಡ 3ನೇ ಸ್ಥಾನ ಪಡೆದುಕೊಂಡಿತ್ತು. 2018ರಲ್ಲಿ ರನ್ನರ್ಸ್ ಸ್ಥಾನ ಪಡೆದಿರುವುದು ಫಿಫಾ ವಿಶ್ವಕಪ್‌ನಲ್ಲಿ ಕ್ರೊಯೇಶಿಯದ ಉತ್ತಮ ಸಾಧನೆಯಾಗಿದೆ.

ಶನಿವಾರ ಖಲೀಫ ಇಂಟರ್‌ನ್ಯಾಶನಲ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಕ್ರೊಯೇಶಿಯ 7ನೇ ನಿಮಿಷದಲ್ಲಿ ಮುನ್ನಡೆ ಪಡೆಯಿತು. ಜೊಸ್ಕೊ ಗ್ವಾರ್ಡಿಯೊಲ್ ಕ್ರೊಯೇಶಿಯಕ್ಕೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು.

9ನೇ ನಿಮಿಷದಲ್ಲಿ ಗೋಲು ಗಳಿಸಿದ ಅಶ್ರಫ್ ದಾರಿ ಮೊರೊಕ್ಕೊ ತಂಡ 1-1ರಿಂದ ಸಮಬಲ ಸಾಧಿಸಲು ನೆರವಾದರು.
 42ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಮಿಸ್ಲ್ಲಾವ್ ಒರಿಸಿಕ್ ಮೊದಲಾರ್ಧದ ಅಂತ್ಯದಲ್ಲಿ ಕ್ರೊಯೇಶಿಯ 2-1 ಮುನ್ನಡೆ ಸಾಧಿಸಲು ನೆರವಾದರು. ಕ್ರೊಯೇಶಿಯ ಇದೇ ಮುನ್ನಡೆಯನ್ನು ಕೊನೆಯ ತನಕ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಮೂರನೇ ಸ್ಥಾನ ಪಡೆದಿರುವ ಕ್ರೊಯೇಶಿಯ 220 ಕೋ.ರೂ. ಬಹುಮಾನ ಪಡೆದಿದೆ. 4ನೇ ಸ್ಥಾನ ಪಡೆದಿರುವ ಮೊರೊಕ್ಕೊ ತಂಡ 204 ಕೋ.ರೂ. ಬಹುಮಾನ ಪಡೆಯಲಿದೆ.
 

Similar News