ಫಿಫಾ ವಿಶ್ವಕಪ್‌ ಟ್ರೋಫಿ ಅನಾವರಣಗೊಳಿಸಿದ ದೀಪಿಕಾ ಪಡುಕೋಣೆ: ಬಲಪಂಥೀಯರ ಕಾಲೆಳೆದ ನೆಟ್ಟಿಗರು

Update: 2022-12-18 18:56 GMT

ಹೊಸದಿಲ್ಲಿ/ದೋಹಾ: ಬಾಲಿವುಡ್‌ ತಾರೆ ದೀಪಿಕಾ ಪಡುಕೋಣೆ ಫಿಫಾ ವಿಶ್ವಕಪ್‌ ಟ್ರೋಫಿಯನ್ನು ಅನಾವರಣಗೊಳಿಸಿದ್ದಾರೆ. ಕತರ್‌ನ ದೋಹಾದ ಲುಸೈಲ್ ಸ್ಟೇಡಿಯಂನಲ್ಲಿ ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ಫೈನಲ್‌ಗೆ ಮುನ್ನ ದೀಪಿಕಾ ಪಡುಕೋಣೆ ಫಿಫಾ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಿದ್ದು, ದೀಪಿಕಾರೊಂದಿಗೆ ಸ್ಪೇನ್‌ನ ಮಾಜಿ ಗೋಲ್‌ಕೀಪರ್ ಮತ್ತು ನಾಯಕ ಇಕರ್ ಕ್ಯಾಸಿಲಾಸ್ ಇದ್ದರು.

ಮೇ, 2022 ರಲ್ಲಿ ಐಷಾರಾಮಿ ಬ್ರಾಂಡ್ ಲೂಯಿ ವಿಟಾನ್‌ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ದೀಪಿಕಾ, ಫೈನಲ್‌ನ ವಿಜೇತರಿಗೆ ನೀಡಲಾಗುವ ಟ್ರೋಫಿಯನ್ನು ಅನಾವರಣಗೊಳಿಸಿದ್ದಾರೆ.

 ಬಲಪಂಥೀಯರಿಗೆ ಮುಖಭಂಗ ಎಂದ ನೆಟ್ಟಿಗರು

ದೀಪಿಕಾ ಪಡುಕೋಣೆ ವಿಶ್ವದ ಅತ್ಯಂತ ದುಬಾರಿ ಪಂದ್ಯಾಕೂಟದ ಫೈನಲ್‌ ಟ್ರೋಫಿಯನ್ನು ಅನಾವರಣಗೊಳಿಸುತ್ತಿದ್ದಂತೆ, ಭಾರತೀಯ ಅಭಿಮಾನಿಗಳು ಬಲಪಂಥೀಯರ ಕಾಲೆಳಿದಿದ್ದಾರೆ. ಇತ್ತೀಚೆಗೆ ಬಿಡುಗಡೆಗೊಂಡಿದ್ದ ʼಪಠಾಣ್‌ʼ ಚಿತ್ರದ ಬೇಷರಂ ಹಾಡಿನ ಕುರಿತಂತೆ ಬಲಪಂಥೀಯರು ಮಾಡಿರುವ ವಿವಾದದ ಹಿನ್ನೆಲೆಯಲ್ಲಿ ದೀಪಿಕಾ ಅವರು ಫಿಫಾ ಟ್ರೋಫಿಯನ್ನು ಅನಾವರಣಗೊಳಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಸಿಎಎ ಪ್ರತಿಭಟನೆ ಸಂದರ್ಭದಲ್ಲಿ ಜೆಎನ್‌ಯು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದ ದೀಪಿಕಾ ಅವರನ್ನು ಬಲಪಂಥೀಯ ಹಿಂದುತ್ವವಾದಿ ಟ್ರೋಲ್‌ ಪಡೆಯು ಒಂದಿಲ್ಲೊಂದು ವಿಷಯಕ್ಕೆ ಮುಗಿ ಬೀಳುತ್ತಿದ್ದು, ಪಠಾಣ್‌ ಚಿತ್ರದ ಬಹಿಷ್ಕಾರದ ಬೆದರಿಕೆಯನ್ನೂ ಹಾಕುತ್ತಿದೆ.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ನೆಟ್ಟಿಗರು ಹಾಗೂ ದೀಪಿಕಾ ಅಭಿಮಾನಿಗಳು, ʼನೀವು ಆಕೆಯನ್ನು ಬಹಿಷ್ಕರಿಸಿ, ಅವರು ಉನ್ನತ ಸ್ಥಾನಕ್ಕೆ ತಲುಪುತ್ತಲೇ ಇದ್ದಾರೆʼ ಎಂದು ಬಲಪಂಥೀಯರ ಕಾಲೆಳೆದಿದ್ದಾರೆ.

“ನೀವು ಅವರನ್ನು ಬಹಿಷ್ಕರಿಸಲು ಬಯಸುವಿರಾ? ಇದು ಎಂದಿಗೂ ಆಗುವುದಿಲ್ಲ. ಲೂಯಿ ವಿಟಾನ್‌ ನ ಜಾಗತಿಕ ಬ್ರ್ಯಾಂಡ್ ರಾಯಭಾರಿಯಾಗಿ ಪ್ರತಿನಿಧಿಸುವ ದೀಪಿಕಾ ಪಡುಕೋಣೆ ಫಿಫಾ ಟ್ರೋಫಿಯನ್ನು ಅನಾವರಣಗೊಳಿಸುವ ಗೌರವವನ್ನು ಪಡೆದ ಮೊದಲ ಭಾರತೀಯರಾಗಿದ್ದಾರೆ. ನಿಮ್ಮ ಬಯಕೆಗಳು ಎಂದಿಗೂ ನೆರವೇರುವುದಿಲ್ಲ!” ಎಂದು ನೆಟ್ಟಿಗರೊಬ್ಬರು ಟ್ವೀಟ್‌ ಮಾಡಿದ್ದಾರೆ.

“ದೀಪಿಕಾ ಪಡುಕೋಣೆ ಫಿಫಾ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸುವ ಮೂಲಕ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದರಿಂದ ಅಂಧಭಕ್ತರಿಗೆ ಇದು ಕಠಿಣ ದಿನ!” ಎಂದು ಡಾ. ರಾಕೇಶ್‌ ಕೆ ರಾಥೋರ್‌ ಎಂಬವರು ಟ್ವೀಟ್‌ ಮಾಡಿದ್ದಾರೆ.

  

Similar News