×
Ad

ಸಹಕಾರಿ ಸಂಸ್ಥೆಯ ಶ್ರೇಷ್ಠತೆ ಮಾಪಕ ಸೇವೆ: ಬಿಷಪ್ ಜೆರಾಲ್ಡ್ ಲೋಬೊ

ಉಡುಪಿ ಕೆಥೋಲಿಕ್ ಸೊಸೈಟಿಯ ರಜತ ಸಂಭ್ರಮ ಉದ್ಘಾಟನೆ

Update: 2022-12-18 22:58 IST

ಉಡುಪಿ, ಡಿ.18: ಸಹಕಾರಿ ಕ್ಷೇತ್ರವು ಶ್ರೇಷ್ಠತೆ ಸಾಧಿಸಲು ಹಾಗೂ ಪ್ರಗತಿ ಪಥದಲ್ಲಿ ಮುಂದುವರೆಯಲು ದಕ್ಷ ಆಡಳಿತ ಮಂಡಳಿ, ಸಮರ್ಪಿತ ಮನೋ ಭಾವದ ಸಿಬ್ಬಂದಿ ಹಾಗೂ ಸದಸ್ಯರು ಮುಖ್ಯವಾಗಿದ್ದಾರೆ. ಈ ಮೂರು ಸ್ತಂಭ ಗಳಿಂದ ಯಾವುದೇ ಸಂಸ್ಥೆ ಸ್ಥಿರ ಹಾಗೂ ಬಲಿಷ್ಠವಾಗಿ ನಿಲ್ಲಲು ಸಾಧ್ಯ ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.

ಉಡುಪಿಯ ಶೋಕಮಾತಾ ಇಗರ್ಜಿ ವಠಾರದಲ್ಲಿರುವ ಅವೆ ಮರಿಯಾ ಸಭಾಂಗಣದಲ್ಲಿ ರವಿವಾರ ನಡೆದ ಉಡುಪಿ ಕೆಥೋಲಿಕ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ರಜತ ಸಂಭ್ರಮದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.ಇಂದು ಸೇವಾ ಕ್ಷೇತ್ರವು ಬಲಿಷ್ಠ ಮತ್ತು ವಿಸ್ತಾರವಾಗಿ ಬೆಳೆದಿದೆ. ಈ ಕ್ಷೇತ್ರದಲ್ಲಿ ಗುಣಮಟ್ಟ, ಶ್ರೇಷ್ಠತೆ ತೋರಬೇಕಾದರೆ ಯಾವುದೇ ವಸ್ತು, ಉತ್ಪನ್ನಗಳನ್ನು ಕೈಯಲ್ಲಿ ಇರುವುದು ತೋರಿಸಲು ಸಾಧ್ಯವಿಲ್ಲ. ಸೇವೆಯ ಗುಣಮಟ್ಟ ಹಾಗೂ ಶ್ರೇಷ್ಠತೆ ಮಾಪಕ ಸೇವೆಯೇ ಆಗಿದೆ. ಸೇವೆಯ ಗುಣಮಟ್ಟವು ಶ್ರೇಷ್ಠತೆಯನ್ನು ತೋರಿಸುತ್ತದೆ ಎಂದರು.

ಕಳೆದ 25ವರ್ಷಗಳಲ್ಲಿ ತನ್ನ ಶ್ರೇಷ್ಠತೆಯನ್ನು ಅತ್ಯಂತ ಗುಣಮಟ್ಟ ಮತ್ತು ಕ್ಷಮತೆಯನ್ನು ತೋರಿದ ಕೆಥೋಲಿಕ್ ಸೊಸೈಟಿಯು ನಮ್ಮ ಸಮುದಾಯದ ಹೆಮ್ಮೆಯಾಗಿದೆ. ಉನ್ನತ ಆದರ್ಶ, ಧ್ಯೇಯದೊಂದಿಗೆ ಆರಂಭಗೊಂಡ ಈ ಸಂಸ್ಥೆಯು ಇಂದು ಹೆಮ್ಮರವಾಗಿ ಬೆಳೆದಿದೆ ಎಂದು ಅವರು ತಿಳಿಸಿದರು.ಕಲ್ಯಾಣಪುರದ ಮಿಲಾಗ್ರಿಸ್ ಕೆಥೆಡ್ರಲ್‌ನ ರೆಕ್ಟರ್ ಅ.ವಂ.ವಲೇರಿಯನ್ ಮೆಂಡೋನ್ಸಾ, ಶೋಕಮಾತಾ ಇಗರ್ಜಿಯ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಕೆಥೋಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷೆ ಮೇರಿ ಡಿಸೋಜ ಮುಖ್ಯ ಅತಿಥಿಗಳಾಗಿದ್ದರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ತನ್ನ ವೆಬ್‌ಸೈಟ್‌ಗೆ ಚಾಲನೆ ನೀಡಲಾಯಿತು. ರಜತ ಮಹೋತ್ಸವದ ಸವಿನೆನಪಿಗಾಗಿ ಹೊರತರಲಾದ ರಜತ ಸೌರಭ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ರಜತ ಸಂಭ್ರಮದ ಪ್ರಯುಕ್ತ ಪಾಂಬೂರಿನ ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರ, ಹ್ಯೂಮಾನಿಟಿ ಟ್ರಸ್ಟ್ ಬೆಳ್ಮಣ್, ಮಮತೆಯ ತೊಟ್ಟಿಲು ಸಂತೆಕಟ್ಟೆ, ಹಝರತ್ ಸಾದತ್ ವೃದ್ಧಾಶ್ರಮ ಕಾಪು ಮತ್ತು ಆರ್ಥಿಕವಾಗಿ ಹಿಂದುಳಿದ 15 ವಿದ್ಯಾರ್ಥಿಗಳಿಗೆ ಸಹಾಯಧನವನ್ನು ನೀಡಲಾಯಿತು. ಸಂಸ್ಥೆಗೆ ಕೊಡುಗೆ ನೀಡಿದ ಹಿರಿಯರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ಫ್ರಾಂಕ್ಲಿನ್ ಮೆನೇಜಸ್, ಫೆಲಿಕ್ಸ್ ಪಿಂಟೋ, ಇಗ್ನೇಷಿಯಸ್ ಮೋನಿಸ್, ಜೇಮ್ಸ್ ಡಿಸೋಜ, ಪರ್ಸಿ ಜೆ.ಡಿಸೋಜ, ಆರ್ಚಿಬಾಲ್ಡ್ ಎಸ್. ಡಿಸೋಜ, ಕೇವಿನ್ ಆರ್.ಪಿರೇರಾ, ಜೆಸಿಂತಾ ಡಿಸೋಜ, ಗಿಲ್ಬರ್ಟ್ ಫೆರ್ನಾಂಡಿಸ್, ಡಾ.ನೇರಿ ಕರ್ನೆಲಿಯೋ, ಲೋಯೆಟ್ಸ್ ಜೆ.ಕರ್ನೆಲಿಯೋ ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಕೆಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಅಲೋಶಿಯಸ್ ಡಿ ಅಲ್ಮೇಡಾ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಸಂದೀಪ್ ಎ.ಫೆರ್ನಾಂಡೀಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷ ಲೂವಿಸ್ ಲೋಬೊ ವಂದಿಸಿದರು. ಮೈಕಲ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Similar News