×
Ad

ಸಲಿಂಗಿ ವಿವಾಹ ಕುರಿತು ಇಬ್ಬರು ನ್ಯಾಯಾಧೀಶರು ನಿರ್ಧಾರ ಪ್ರಕಟಿಸುವ ಹಾಗಿಲ್ಲ: ಬಿಜೆಪಿ ಸಂಸದ ಸುಶೀಲ್‌ ಕುಮಾರ್‌ ಮೋದಿ

Update: 2022-12-19 17:13 IST

ಹೊಸದಿಲ್ಲಿ: ದೇಶದಲ್ಲಿ ಸಲಿಂಗಿಗಳ ವಿವಾಹವನ್ನು ಕಾನೂನುಬದ್ಧಗೊಳಿಸಬಾರದು ಹಾಗೂ ದೇಶದ ಸಾಂಸ್ಕೃತಿಕ ಅಡಿಪಾಯಕ್ಕೆ ವಿರುದ್ಧವಾದ ಇಂತಹ ವಿವಾಹದ ಕುರಿತು ನ್ಯಾಯಾಂಗ ಕೂಡ ಯಾವುದೇ ತೀರ್ಮಾನ ಪ್ರಕಟಿಸಬಾರದು ಎಂದು ಬಿಜೆಪಿ (BJP) ಸಂಸದ ಸುಶೀಲ್‌ ಕುಮಾರ್‌ ಮೋದಿ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಶೂನ್ಯವೇಳೆಯಲ್ಲಿ  ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು "ಭಾರತದಲ್ಲಿ ಸಲಿಂಗಿ ವಿವಾಹವು ಮಾನ್ಯವಾಗಿಲ್ಲ ಹಾಗೂ ಯಾವುದೇ ಕಾನೂನಿನಡಿ ಸ್ವೀಕಾರಾರ್ಹವಲ್ಲ, ಇಂತಹ ವಿವಾಹ ದೇಶದ ಸೂಕ್ಷ್ಮ ವೈಯಕ್ತಿಕ ಕಾನೂನುಗಳ ಸಮತೋಲನವನ್ನು ಬಾಧಿಸಬಹುದು. ಇಬ್ಬರು ನ್ಯಾಯಾಧೀಶರು ಈ ಕುರಿತು ನಿರ್ಧರಿಸುವ ಹಾಗಿಲ್ಲ. ಇದನ್ನು ಸಂಸತ್ತಿನಲ್ಲಿ ಚರ್ಚಿಸಬೇಕು," ಎಂದು ಅವರು ಹೇಳಿದರು.

"ಸಲಿಂಗಿ ವಿವಾಹವನ್ನು ಬಲವಾಗಿ ವಿರೋಧಿಸಿ ಕೇಂದ್ರ ಸರ್ಕಾರ ಈ ಕುರಿತು ನ್ಯಾಯಾಲಯದಲ್ಲಿ ತನ್ನ ನಿಲುವು ಸ್ಪಷ್ಟಪಡಿಸಬೇಕು," ಎಂದು ಅವರು ಹೇಳಿದರು.

"ದತ್ತು, ಕೌಟುಂಬಿಕ ಹಿಂಸೆ, ವಿಚ್ಛೇದನ, ವಿವಾಹವಾದ ಪುರುಷನ ಮನೆಯಲ್ಲಿ ಇರುವ ಹಕ್ಕು ಮುಂತಾದವುಗಳಿಗೆ ಸಂಬಂಧಿಸಿದ ಕಾನೂನುಗಳು ಪುರುಷ ಹಾಗೂ ಮಹಿಳೆಯ ನಡುವಿನ ವಿವಾಹಕ್ಕೆ ಸಂಬಂಧಿಸಿದ್ದಾಗಿದೆ. ಸಲಿಂಗಿ ವಿವಾಹವನ್ನು ಕಾನೂನಿನಡಿ ಮಾನ್ಯಗೊಳಿಸಿದರೆ ಇತರ ಕಾನೂನುಗಳಲ್ಲಿಯೂ ಬದಲಾವಣೆ ಅನಿವಾರ್ಯವಾಗುತ್ತದೆ," ಎಂದು ಅವರು ಹೇಳಿದರು.

ವಿಶೇಷ ವಿವಾಹ ಕಾಯಿದೆ 1954 ಅಡಿಯಲ್ಲಿ ಸಲಿಂಗಿ ವಿವಾಹವನ್ನು ಮಾನ್ಯಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಹಾಗೂ ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ ಪೀಠ ನಡೆಸುತ್ತಿದೆ.

Similar News