ಮಣಿಪಾಲ: ‘ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ’ ವಿಜೇತರಿಗೆ ಬಹುಮಾನ

Update: 2022-12-19 15:17 GMT

ಮಣಿಪಾಲ: ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಗಾಂಧಿ ಅಧ್ಯಯನ ಕೇಂದ್ರ, ಎಂ.ಜಿ.ಎಂ ಕಾಲೇಜು ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ‘ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ’ ವತ್ತು ‘ಬರಿಯ ಬಟ್ಟೆಯಲ್ಲ ಭಾರತದ ಬಾವುಟ’ ಪುಸ್ತಕಗಳ ಕುರಿತು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಉತ್ತಮ ನಿರ್ವಹಣೆ ತೋರಿದ ೨೦ ಪ್ರೌಢಶಾಲಾ ವಿದ್ಯಾರ್ಥಿ ಗಳಿಗೆ ಪ್ರಮಾಣ ಪತ್ರ ವಿತರಿಸುವ ಕಾರ್ಯಕ್ರಮ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ.ಟಿಎಂಎಪೈ ಶಿಕ್ಷಣ ಮಹಾ ವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ. ಮಹಾಬಲೇಶ್ವರ ರಾವ್ ಮಾತನಾಡಿ, ಇಂದಿನ ಬದಲಾದ ಕಾಲಘಟ್ಟದಲ್ಲಿ ಗಾಂಧೀ ಮೌಲ್ಯಗಳನ್ನು ವಿದ್ಯಾರ್ಥಿಗಳು ಅಗತ್ಯವಾಗಿ ತಿಳಿದುಕೊಂಡು ಸಾಧ್ಯವಾದಷ್ಟು ಅನುಸರಿ ಸಬೇಕು.ಇದಕ್ಕೆ ಬೊಳುವಾರು ಮಹಮದ್ ಕುಂಞಿ ಇವರು ಬರೆದ ಪುಸ್ತಕ ಬಹಳ ಸಹಕಾರಿ ಎಂದರು.

ನಮ್ಮ ರಾಷ್ಟ್ರದ್ವಜದ ಹಿನ್ನೆಲೆ, ಧ್ವಜ ಆರೋಹಣ ಮತ್ತು ಅವರೋಹಣದ ನಿಯಮಗಳನ್ನು ತಿಳಿದುಕೊಳ್ಳಲು ಬರಿಯ ಬಟ್ಟೆಯಲ್ಲ ಭಾರತದ ಬಾವುಟ ಹೊತ್ತಿಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.

ಡಯಟಿನ ಪ್ರಾಧ್ಯಾಪಕರಾದ ಯೋಗ ನರಸಿಂಹ ಸ್ವಾಮಿ, ಎಂಜಿಎಂ ಗಾಂಧಿ ಅಧ್ಯಯನ ಕೇಂದ್ರ ವಿನೀತ್ ರಾವ್, ಗೋವಿಂದ ಪೈ ಸಂಶೋಧನಾ ಕೇಂದ್ರದ ಉಪನಿರ್ದೇಶಕ ಡಾ.ಜಗದೀಶ್ ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿದರು. ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಗಾಂಧಿ ಕುರಿತಾದ ಪುಸ್ತಕಗಳನ್ನು ವಿತರಿಸಲಾಯಿತು.

ಬಿವಿಟಿಯ ಮುಖ್ಯ ವ್ಯವಸ್ಥಾಪಕ ಮನೋಹರ ಕಟ್ಗೇರಿ ಸ್ವಾಗತಿಸಿದರು. ಮುಖ್ಯ ಕಾರ್ಯಕ್ರಮ ಸಂಯೋಜಕಿ ಎ.ಲಕ್ಷ್ಮೀಬಾಯಿ ಪ್ರಾಸ್ತಾವಿಕ ಮಾತು ಗಳನ್ನಾಡಿದರು. ಕಾರ್ಯಕ್ರಮ ಅಧಿಕಾರಿ ಪ್ರತಿಮಾ ವಂದಿಸಿ ಕಾರ್ಯಕ್ರಮ ಸಂಯೋಜಕ ರಾಘವೇಂದ್ರ ಆಚಾರ್ಯ ನಿರೂಪಿಸಿದರು.

Similar News