ಮಹಾರಾಷ್ಟ್ರ: ಬಾಲಕಿಗೆ ಲೈಂಗಿಕ ದೌರ್ಜನ್ಯ; 8 ಮಂದಿಯ ಬಂಧನ

Update: 2022-12-19 15:52 GMT

ಮುಂಬೈ, ಡಿ. 19 : ಹದಿನೈದು ವರ್ಷದ ಬಾಲಕಿಗೆ 8 ಮಂದಿಯ ಗುಂಪು ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗ್ಗೆ ವರೆಗೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ಪಾಲ್ಘಾರ್ (Palghar)ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಾನು ಅಪಹರಣಕ್ಕೊಳಗಾಗಿದ್ದೇನೆ ಎಂದು ಬಾಲಕಿ ತನ್ನ ಗೆಳೆಯನಿಗೆ ಮೊಬೈಲ್ ಫೋನ್ ಮೂಲಕ ಸಂದೇಶ ಕಳುಹಿಸಿದ್ದಳು. ಆತ ಅದನ್ನು ಆಕೆಯ ಕುಟುಂಬದ ಸದಸ್ಯರಿಗೆ ಫಾರ್ವರ್ಡ್ ಮಾಡಿದ್ದ. ಅನಂತರ ಈ ವಿಷಯ ಬೆಳಕಿಗೆ ಬಂತು.

ಬಾಲಕಿಯ ತಂದೆ ಶನಿವಾರ ಅಪರಾಹ್ನ ಸುಮಾರು 2 ಗಂಟೆಗೆ ತನ್ನ ಪುತ್ರಿ ಶುಕ್ರವಾರ ರಾತ್ರಿಯಿಂದ ನಾಪತ್ತೆಯಾಗಿದ್ದಾಳೆ ಎಂದು ಮಾಹಿತಿ ನೀಡಿದ್ದರು. ತಾನು ಮೊಬೈಲ್ ಫೋನ್‌ನಲ್ಲಿ ಪುತ್ರಿಯೊಂದಿಗೆ ಮಾತನಾಡಲು ಸಫಲನಾಗಿದ್ದೇನೆ. ಆಕೆ ಮಾತನಾಡುವ ವೇಳೆ ಅಳುತ್ತಿದ್ದಳು ಎಂದು ಅವರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಅನಂತರ ಬಾಲಕಿಯನ್ನು ಕಡಲ ತೀರದ ಸಮೀಪದ ನಿರ್ಜನ ಪ್ರದೇಶದಲ್ಲಿ ಪತ್ತೆ ಮಾಡಲಾಯಿತು. ಆರೋಪಿಗಳು ನಿರ್ಮಾಣ ಹಂತದಲ್ಲಿರುವ ಬಂಗ್ಲೆಯಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅನಂತರ ಆಕೆಯನ್ನು ಕಡಲ ತೀರಕ್ಕೆ ಕರೆದುಕೊಂಡು ಬಂದು ಮತ್ತೆ ಲೈಂಗಿಕ ಕಿರುಕುಳ ನೀಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಬಾಲಕಿ ಶನಿವಾರ ದಾಖಲಿಸಿದ ದೂರಿನ ಆಧಾರದಲ್ಲಿ ರವಿವಾರ ಮುಂಜಾನೆ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳು ಹಾಗೂ ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Similar News