ಮಾನವ ಕಳ್ಳ ಸಾಗಾಟ : ಅಸ್ಸಾಂನ 6 ಬಾಲಕಿಯರ ರಕ್ಷಣೆ

Update: 2022-12-19 17:12 GMT

ಗುವಾಹತಿ, ಡಿ. 19: ಕಳೆದ 10 ದಿನಗಳಲ್ಲಿ ನಾಲ್ಕು ರಾಜ್ಯಗಳಲ್ಲಿ ಮಾನವ ಕಳ್ಳ ಸಾಗಾಟಗಾರರಿಂದ ಅಸ್ಸಾಂ(Assam)ನ 6 ಮಂದಿ ಬಾಲಕಿಯರನ್ನು ರಕ್ಷಿಸಲಾಗಿದೆ ಎಂದು ರಾಜ್ಯ ಪೊಲೀಸರು ರವಿವಾರ ತಿಳಿಸಿದ್ದಾರೆ. ಜಿಲ್ಲೆಯ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಥಮ ಮಾಹಿತಿ ವರದಿ ದಾಖಲಾದ ಬಳಿಕ ಅವರನ್ನು ರಕ್ಷಿಸಲಾಗಿದೆ ಎಂದು ಕರ್ಬಿ ಅಂಗ್ಲಾಂಗ್‌ನ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಂಗ್‌ಖಾನ್ ಕುಮಾರ್ ನಾಥ್(Kangkhan Kumar Nath) ಅವರು ತಿಳಿಸಿದ್ದಾರೆ.

‘‘ಮೊದಲ ಎಫ್‌ಐಆರ್ ಅನ್ನು ಡಿಸೆಂಬರ್ 8ರಂದು ದಿಫು ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು. ಇದರ ಆಧಾರದ ಮೇಲೆ ಹರ್ಯಾಣದ ಫತೇಬಾದ್‌ನಿಂದ ನಾವು 16 ವರ್ಷದ ಬಾಲಕಿಯನ್ನು ರಕ್ಷಿಸಿದೆವು. ಅಲ್ಲದೆ, ಮಾನವ ಕಳ್ಳ ಸಾಗಾಟಗಾರರನ್ನು ಬಂಧಿಸಿದೆವು’’ ಎಂದು ಅವರು ತಿಳಿಸಿದ್ದಾರೆ. ಅನಂತರ ಜಿಲ್ಲೆಯ ಬೋಕಜಾನ್ (Bocajon)ಪೊಲೀಸ್ ಠಾಣೆಯಲ್ಲಿ ಮತ್ತೆ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಬಾಲಕಿಯರನ್ನು ರಕ್ಷಿಸಲು ಕಾರ್ಯಾಚರಣೆ ಆರಂಭಿಸಿದೆವು. ‘‘ಬೋಕಜಾನ್ ರೈಲ್ವೆ ನಿಲ್ದಾಣದಿಂದ ಇಬ್ಬರು ಬಾಲಕಿಯರನ್ನು ಹಾಗೂ ನಾಗಾಲ್ಯಾಂಡ್‌ನ ದಿಮಾಪುರ ರೈಲ್ವೆ ನಿಲ್ದಾಣದಿಂದ ಹಾಗೂ ತೀನ್‌ಸುಕಿಯಾದಿಂದ ತಲಾ ಒಬ್ಬಳು ಬಾಲಕಿಯರನ್ನು ರಕ್ಷಿಸಿದೆವು ಎಂದು ಅವರು ತಿಳಿಸಿದ್ದಾರೆ. ಇನ್ನೋರ್ವ 14 ವರ್ಷದ ಬಾಲಕಿಯನ್ನು ರಾಜಸ್ಥಾನದ ಝುಂಝುನು ಜಿಲ್ಲೆಯಿಂದ ರಕ್ಷಿಸಿದೆವು ಎಂದು ನಾಥ್ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಕಳೆದ ವಾರ ಅಸ್ಸಾಂನ ಸೋಂತಿಪುರ ಜಿಲ್ಲೆಯ ಐವರು ಬಾಲಕಿಯರನ್ನು ಎನ್‌ಸಿಆರ್‌ನಲ್ಲಿ ಮಾನವ ಕಳ್ಳ ಸಾಗಾಟಗಾರರಿಂದ ರಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಬಾಲಕಿಯರು ಸೆಪ್ಟಂಬರ್‌ನಿಂದ ನಾಪತ್ತೆಯಾಗಿದ್ದರು.

ಅಸ್ಸಾಂ ಹಾಗೂ ದಿಲ್ಲಿಯ ಪೊಲೀಸ್ ಪಡೆಗಳ ಜಂಟಿ ಕಾರ್ಯಾಚರಣೆಯಿಂದ ಈ ಬಾಲಕಿಯರನ್ನು ರಕ್ಷಿಸಲಾಗಿದೆ. ಇವರು ಗಾಝಿಯಾಬಾದ್, ಫರೀದಾಬಾದ್ ಹಾಗೂ ದಿಲ್ಲಿಯಲ್ಲಿ ಪತ್ತೆಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಭದ್ರ ಒರಾಂಗ್ ಹೆಸರಿನ ವ್ಯಕ್ತಿಯೋರ್ವನನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 

Similar News