×
Ad

ಉಡುಪಿ ಕಮಲಾಕ್ಷಿ ಸೊಸೈಟಿಯಿಂದ 150 ಕೋಟಿ ರೂ. ವಂಚನೆ ಆರೋಪ: ಠೇವಣಿದಾರರಿಂದ ಕಚೇರಿಗೆ ನುಗ್ಗಿ ಪ್ರತಿಭಟನೆ

ʼಆತ್ಮಹತ್ಯೆಗೆ ಯತ್ನಿಸಿದ ಸಿಬ್ಬಂದಿʼ

Update: 2022-12-19 22:17 IST

ಉಡುಪಿ: ಉಡುಪಿ ಕಮಲಾಕ್ಷಿ ವಿವಿದೋದ್ದೇಶ ಸಹಕಾರ ಸಂಘ ದಿಂದ 150ಕೋಟಿ ರೂ. ವಂಚನೆ ಎಸಗಿರುವುದಾಗಿ ಆರೋಪಿಸಿ ಠೇವಣಿದಾರರು ಇಂದು ಬೆಳಗ್ಗೆ ನಗರದ ಸಂಸ್ಕೃತ ಕಾಲೇಜು ಎದುರಿನ ಕಟ್ಟಡದಲ್ಲಿರುವ ಸೊಸೈಟಿಯ ಕಚೇರಿಗೆ ನುಗ್ಗಿ ಪತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಈ ಮಧ್ಯೆ ನಾಟಕೀಯ ಬೆಳವಣಿಗೆಯಲ್ಲಿ ಕಚೇರಿಯಲ್ಲಿದ್ದ ಮಹಿಳಾ ಸಿಬ್ಬಂದಿ  ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು.

ಸಂಘದಲ್ಲಿ 800ಕ್ಕೂ ಅಧಿಕ ಠೇವಣಿದಾರರು ಇಟ್ಟ 100-150ಕೋಟಿ ರೂ. ಠೇವಣಿಯ ಬಡ್ಡಿ ಹಾಗೂ ವಾಯಿದೆ ಮುಗಿದ ಹಾಗೂ ಪೂರ್ಣ ಠೇವಣಿಯ ಮೊತ್ತವನ್ನು ಹಿಂತಿರುಗಿಸದೆ ಮೋಸ ಮಾಡುತ್ತಿರುವುದಾಗಿ ಆರೋಪಿಸಿ 100ಕ್ಕೂ ಅಧಿಕ ಠೇವಣಿದಾರರು ಸೊಸೈಟಿಯ ಕಚೇರಿಗೆ ನುಗ್ಗಿ ಪ್ರತಿಭಟಿಸಿದರು. ಮೋಸ ಮಾಡಿರುವ ಸೊಸೈಟಿ ಅಧ್ಯಕ್ಷ ಬಿ.ವಿ.ಲಕ್ಷೀನಾರಾಯಣ ಭಟ್ ವಿರುದ್ಧ ಘೋಷಣೆಗೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು, ಅಧ್ಯಕ್ಷರು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು.
ಈ ಮಧ್ಯೆ ಕಚೇರಿಯಲ್ಲಿದ್ದ ಮಹಿಳಾ ಸಿಬ್ಬಂದಿ ಅವಮಾನ ತಾಳಲಾರದೆ ಕಣ್ಣೀರಿಡುತ್ತ ತನ್ನ ಬ್ಯಾಗ್‌ನಲ್ಲಿದ್ದ ಕೆಲವು ಮಾತ್ರೆಯನ್ನು ತೆಗೆದು ಸೇವಿಸಲು ಯತ್ನಿಸಿದರು. ತಕ್ಷಣ ಠೇವಣಿದಾರರು ಆಕೆಯನ್ನು ತಡೆದು ಬಾಯಲ್ಲಿದ್ದ ಮಾತ್ರೆಯನ್ನು ಉಗುಳಿಸಿ ಅನಾಹುತವನ್ನು ತಪ್ಪಿಸಿದರು. ಇದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು.

‘ಈ ಸೊಸೈಟಿಯವರು ಎರಡು ವರ್ಷಗಳ ಹಿಂದೆ ಶೇ.12 ಬಡ್ಡಿ ನೀಡುವು ದಾಗಿ ನಂಬಿಸಿ, ಹಿರಿಯ ನಾಗರಿಕರು ಸೇರಿದಂತೆ ನೂರಾರು ಮಂದಿಯಿಂದ ಠೇವಣಿಯನ್ನು ಪಡೆದುಕೊಂಡಿದ್ದರು. ಅಲ್ಲದೆ ಕೊರೋನದಿಂದ ಕೆಲಸ ಕಳೆದು ಕೊಂಡವರು ತಮಗೆ ಸಿಕ್ಕಿದ ಹಣವನ್ನು ಕೂಡ ಇಲ್ಲಿ ಠೇವಣಿಯಾಗಿ ಇಟ್ಟಿದ್ದರು. ಸುಮಾರು ಒಂದು ವರ್ಷಗಳ ಕಾಲ ನಮ್ಮ ಠೇವಣಿಗೆ ಬಡ್ಡಿ ನೀಡಿದರು. ಕಳೆದ ಆರು ತಿಂಗಳಿನಿಂದ ಬಡ್ಡಿ ನೀಡುವುದನ್ನು ನಿಲ್ಲಿಸಿದರು. ಆಗ ನಮಗೆ ಇವರು ಮೋಸ ಮಾಡುತ್ತಿರುವುದು ಅರಿವಿಗೆ ಬಂತು. ಇಲ್ಲಿ ಬಂದು ವಿಚಾರಿಸಿದರೆ ಅಸಲು ಕೊಟ್ಟಿಲ್ಲ ಬಡ್ಡಿಯೂ ಕೊಟ್ಟಿಲ್ಲ. ಎಲ್ಲರಿಗೂ ಸುಮಾರು 150ಕೋಟಿ ರೂ. ವಂಚನೆ ಮಾಡಲಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವೆ’ ಎಂದು ಠೇವಣಿದಾರ ಶ್ರೀನಿವಾಸ ಪ್ರಭು ತಿಳಿಸಿದರು.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉಡುಪಿ ನಗರ ಠಾಣಾ ಪೊಲೀಸರು, ಠೇವಣಿದಾರರನ್ನು ಸಮಾಧಾನ ಪಡಿಸಿದರು. ಠಾಣೆಗೆ ಬಂದು ದೂರು ನೀಡುವುದರೊಂದಿಗೆ ಕಾನೂನಾತ್ಮಕ ಹೋರಾಟ ನಡೆಸುವಂತೆ ಸೂಚನೆ ನಡೆಸಿದರು. ಅದರಂತೆ ಠೇವಣಿದಾರರು ತಮಗೆ ಆಗಿರುವ ವಂಚನೆ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ತೆರಳಿದರು. ಆದರೆ ಈವರೆಗೆ ಈ ಬಗ್ಗೆ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ.

"ನಾನು ಸೊಸೈಟಿಯಲ್ಲಿ 18ಲಕ್ಷ ರೂ. ಠೇವಣೆ ಇಟ್ಟಿದ್ದೇನೆ. ನನಗೆ ಇವತ್ತೇ ಬೇಕು. ಆಪೀಶ್ ಬಂದ್ ಆಗಿದೆ. ಮನೆ ಕಟ್ಟಲು ಕೂಡಿಟ್ಟ ಹಣ ಮೋಸ ಮಾಡಿ ನುಂಗಿ ಹಾಕಿದ್ದಾರೆ. ಇವರು ಹೀಗೆ ಮೋಸ ಮಾಡಬಹುದೆ?."
-ಪುಷ್ಪ ಕಡಿಯಾಳಿ, ಠೇವಣಿದಾರರು


ಠೇವಣಿಗೆ ಶೇ.10-12ರ ಬಡ್ಡಿ ಕೊಡುವುದಾಗಿ ಹೇಳಿದ್ದರು. ಅದೇ ರೀತಿ ಸಾಲಕ್ಕೆ 14-18 ಬಡ್ಡಿ ಹಾಕುವುದಾಗಿ ತಿಳಿಸಿದ್ದರು. ನಾನು ಮೂರು ವರ್ಷಗಳ ಹಿಂದೆ ಟೌನ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಜನರಲ್ ಮೆನೇಜರ್ ಆಗಿದ್ದಾಗ ಇಲ್ಲಿ ಹಣ ಹೂಡಿಕೆ ಮಾಡಿದ್ದೆ. ಈಗ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ನನ್ನ ಹಾಗೆ ಇಲ್ಲಿ ಸುಮಾರು 700 ಮಂದಿ ಠೇವಣಿದಾರರು ಹಣ ಇಟ್ಟು ಮೋಸ ಹೋಗಿದ್ದಾರೆ.
-ರಮೇಶ್ ಪ್ರಭು ಬೆಂಗಳೂರು, ಹಿರಿಯ ನಾಗರಿಕರು

Similar News