‘ಥಳಿತ’ ಪದವನ್ನು ಯೋಧರಿಗೆ ಬಳಸಬಾರದು: ರಾಹುಲ್ ಗಾಂಧಿ ಟೀಕೆ ಕುರಿತು ಎಸ್.ಜೈಶಂಕರ್
ಹೊಸದಿಲ್ಲಿ,ಡಿ.19: ಅರುಣಾಚಲ ಪ್ರದೇಶದ ತವಾಂಗ್ ವಿಭಾಗದಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ (Congress)ಸಂಸದ ರಾಹುಲ್ ಗಾಂಧಿ(Rahul Gandhi)ಯವರು ‘ಪಿಟಾಯಿ (ಥಳಿತ)’ ಶಬ್ದವನ್ನು ಬಳಸಿದ್ದನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ(S. Jaishankar) ಅವರು ಸೋಮವಾರ ಸಂಸತ್ತಿನಲ್ಲಿ ಆಕ್ಷೇಪಿಸಿದರು. ಅರುಣಾಚಲ ಪ್ರದೇಶದಲ್ಲಿ ಚೀನಿ ಅತಿಕ್ರಮಣ ಕುರಿತು ಪ್ರಧಾನಿ ನರೇಂದ್ರ ಮೋದಿ(Narendra Modi)ಯವರನ್ನು ಟೀಕಿಸಿದ ಸಂದರ್ಭದಲ್ಲಿ ರಾಹುಲ್,‘ಹಮಾರೆ ಜವಾನೋಂ ಕಿ ಪಿಟಾಯಿ ಹೋ ರಹಿ ಹೈ (ನಮ್ಮ ಯೋಧರನ್ನು ಥಳಿಸಲಾಗುತ್ತಿದೆ)’ಎಂದು ಹೇಳಿದ್ದರು.
‘ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೆ,ರಾಜಕೀಯ ಟೀಕೆಗಳಿದ್ದರೂ ನಮಗೇನೂ ಸಮಸ್ಯೆಯಿಲ್ಲ. ನನ್ನ ಸ್ವಂತ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳಬೇಕು ಎಂಬ ಮಾತುಗಳನ್ನು ನಾನು ಕೆಲವೊಮ್ಮೆ ಕೇಳಿದ್ದೇನೆ. ಇಂತಹ ಸಲಹೆಗಳನ್ನು ನೀಡುವವರನ್ನು ನಾನು ಕೇವಲ ತಲೆಬಗ್ಗಿಸಿ ಗೌರವಿಸಬಹುದು,ಆದರೆ ನಾವು ನಮ್ಮ ಯೋಧರನ್ನು ನೇರವಾಗಿ ಅಥವಾ ಪರೋಕ್ಷವಾಗಿ ಟೀಕಿಸಬಾರದು ಎನ್ನುವುದು ನನ್ನ ಅಭಿಪ್ರಾಯ.
ನಮ್ಮ ಯೋಧರು ನಮ್ಮ ಗಡಿಗಳ ರಕ್ಷಣೆಗಾಗಿ ಯಾಂಗ್‌ತ್ಸೆಯಲ್ಲಿ 13,000 ಅಡಿಗಳ ಎತ್ತರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ‘ಪಿಟಾಯಿ’ ಶಬ್ದಕ್ಕೆ ಅರ್ಹರಲ್ಲ,ಆ ಪದವನ್ನು ನಮ್ಮ ಯೋಧರಿಗಾಗಿ ಬಳಸಬಾರದು ’ಎಂದು ಜೈಶಂಕರ್ ಹೇಳಿದರು.
ಜೈಪುರದಲ್ಲಿ ತನ್ನ ಭಾರತ ಜೋಡೊ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಈ ಹೇಳಿಕೆಯನ್ನು ನೀಡಿದ್ದರು.