ಉಡುಪಿ: ಪ್ರಜ್ಞಾ ಕ್ರಾಫ್ಟ್ ಮೇಳದಲ್ಲಿ ದೇಶದ ಬಡಕಟ್ಟು ಕಲೆಗಳ ಅನಾವರಣ!
ಉಡುಪಿ, ಡಿ.19: ಉಡುಪಿ ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆ ಹಾಗೂ ಪ್ರಾಚಿ ಉಡುಪಿ ಆಶ್ರಯದಲ್ಲಿ ಉಡುಪಿ ಪಿಪಿಸಿ ಕ್ಯಾಂಪಸ್‌ನಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ಪ್ರಜ್ಞಾ ಕ್ರಾಫ್ಟ್ ಮೇಳಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಮೇಳದಲ್ಲಿ ಛತ್ತಿಸ್‌ಗಡ್ ರಾಜ್ಯದ ಬಸ್ತರ್ ಬುಡಕಟ್ಟು ಸಮುದಾಯದವರ ಕಂಚು, ಕಬ್ಬಿಣ ಹಾಗೂ ಮರದಿಂದ ತಯಾರಿಸಿದ ಲೋಹಶಿಲ್ಪದ ನಂದಿ, ಗಣೇಶ, ಕರ್ಮವೃಕ್ಷ, ಹ್ಯಾಂಡ್ ಮೇಡ್ ಬಾಚಣಿಗೆ, ಬಾಸುರಿ ಸೇರಿದಂತೆ ವಿವಿಧ ಕಲಾಕೃತಿಗಳು, ಬಾಗಲಕೋಟೆ ಜಿಲ್ಲೆಯ ಕೈಮಗ್ಗ ಸೀರೆಗಳು, ಗದಗ ಜಿಲ್ಲೆಯ ಜೊಂಡು ಹುಲ್ಲುನಿಂದ ತಯಾರಿಸಿದ ಟೊಪ್ಪಿ, ಬುಟ್ಟಿಗಳು ಅತ್ಯಾಕರ್ಷಕವಾಗಿವೆ.
ಕುಂದಾಪುರ ನಮ್ಮ ಅಂಗಡಿಯ ಉತ್ಪನ್ನಗಳು, ಮಹಾರಾಷ್ಟ್ರ ರಾಜ್ಯದ ಪಾಲ್ಘಾಟ್ ಜಿಲ್ಲೆಯ ವಾರ್ಲಿ ಟ್ರೈಬಲ್ ಆರ್ಟ್, ರತ್ನಗಿರಿ ಜಿಲ್ಲೆಯ ಕೈಯಿಂದ ತಯಾರಿಸಿದ ಬೆಡ್‌ಶೀಟ್, ಡೋರ್ ಮ್ಯಾಟ್, ಮಧ್ಯಪ್ರದೇಶ ರಾಜ್ಯದ ಗೊಂಡ್ ಆರ್ಟ್, ಸಾಗರದ ಚಿತ್ತಾರ ಆರ್ಟ್ ಮತ್ತು ಕಲಾವಿದ ಕೆ.ಗೌತಮ್ ಅರ್ಕಲಿಕ್ ಮಾಧ್ಯಮದಲ್ಲಿ ತಯಾರಿಸಿದ ಕಲಾಕೃತಿಗಳು, ಬೆಳಗಾಂ ಖಾನಪುರದ ಮಣ್ಣಿನ ಮಡಕೆ, ವಾಸ್ತು ದೀಪ, ಗಂಟೆ ಅಲಂಕಾರಿಕಾ ವಸ್ತುಗಳು, ವಿಶಿಷ್ಟವಾಗಿ ದ್ದವು.
ತುಮಕೂರಿನ ಹ್ಯಾಂಡಮೇಡ್ ಲ್ಯಾಂಪ್ಸ್, ಬಾಗಲಕೋಟೆಯ ಇಳಕಲ್ ಸೀರೆ, ಹೂವಿನಹಡಗಲಿಯಿಂದ ಖಾದಿ ವಸ್ತ್ರಗಳು, ಮೆಕ್ಕೆಜೋಳದ ಸಿಪ್ಪೆಯಿಂದ ತಯಾರಿಸಿದ ಹೂಗುಚ್ಛಗಳು, ತಾಳಿಪಾಡಿ ಕೈಮಗ್ಗ ಸೀರೆಗಳು, ವಿಜಯಪುರದಿಂದ ತಂದಿರುವ ತಾಮ್ರ ಮತ್ತು ಬೆಳ್ಳಿಯಿಂದ ತಯಾರಿಸಿದ ಹ್ಯಾಂಡಮೇಡ್ ಆಭರಣ ಗಳು ಪ್ರಮುಖ ಆಕರ್ಷಣೆಯಾಗಿದೆ. ಸುಮಾರು 25 ವಿವಿಧ ಸ್ಟಾಲ್‌ಗಳು ಮೇಳದಲ್ಲಿವೆ. ನಾಳೆ ಬಿಹಾರ ರಾಜ್ಯದ ಮಧುಬನಿ ಆರ್ಟ್, ಮಂಜುಶಾ, ಗೋಧುನ ಟ್ಯಾಟು ಆರ್ಟ್‌ಗಳು ಬರಲಿವೆ ಎಂದು ಸಂಘಟಕ ಹಾಗೂ ಕಲಾವಿದ ಪುರುಷೋತ್ತಮ ಅಡ್ವೆ ತಿಳಿಸಿದ್ದಾರೆ.
ಮೇಳ ಉದ್ಘಾಟನೆ: ಮೇಳವನ್ನು ಉದ್ಘಾಟಿಸಿದ ಕರ್ನಾಟಕ ಕರಕುಶಲ ಮಂಡಳಿಯ ಜಂಟಿ ಕಾರ್ಯದರ್ಶಿ ಎನ್.ಶಶಿಧರ್ ಮಾತನಾಡಿ, ಹಸ್ತಶಿಲ್ಪಗಳು ಪರಿಸರಕ್ಕೆ ಪೂರಕ ವಾಗಿದ್ದು, ಸಮಾಜದ ಮುಖ್ಯ ಅಂಗವಾಗಿದೆ. ಹಸ್ತಶಿಲ್ಪ ನಶಿಸಿದರೆ ಮುಂದಿನ ಜನಾಂಗಕ್ಕೆ ನಷ್ಟವಾಗುವುದರಿಂದ ಕರಕುಶಲಕರ್ಮಿಗಳಿಗೆ ಆದ್ಯತೆ ನೀಡಬೇಕು. ಆದರೆ ಸರಕಾರದ ಬಳಿ ಹಸ್ತಶಿಲ್ಪಿಗಳ ಅಂಕಿಅಂಶಗಳಿಲ್ಲದಿರು ವುದು ಖೇದಕರ ಸಂಗತಿ ಎಂದರು.
ಮುಖ್ಯ ಅತಿಥಿಗಳಾಗಿ ಪೂರ್ಣಪ್ರಜ್ಞ ಕಾಲೇಜಿನ ಆಡಳಿತ ಮಂಡಳಿ ಕಾರ್ಯ ದರ್ಶಿ ಡಾ.ಚಂದ್ರಶೇಖರ್, ಎಂಜಿಎಂ ಕಾಲೇಜು ಪ್ರಾಂಶುಪಾಲ ಪ್ರೊ. ಲಕ್ಷ್ಮೀ ನಾರಾಯಣ ಮಾತನಾಡಿದರು. ಪಿಪಿಸಿ ಪ್ರಾಂಶುಪಾಲ ಡಾ.ರಾಘವೇಂದ್ರ ಎ., ಆಡಳಿತಾಧಿಕಾರಿ ಡಾ.ಎ.ಪಿ.ಭಟ್ ಮೊದಲಾದವರು ಉಪಸ್ಥಿತರಿದ್ದರು.
ಸಂಧ್ಯಾ ಕಾಲೇಜು ಪ್ರಾಂಶುಪಾಲೆ ಡಾ.ಸುಕನ್ಯಾ ಮೇರಿ ಸ್ವಾಗತಿಸಿದರು. ಪ್ರಾಧ್ಯಾಪಕಿ ಶ್ರೀರಕ್ಷಾ ಕಾರ್ಯಕ್ರಮ ನಿರೂಪಿಸಿದರು. ಪಿಯು ಕಾಲೇಜು ಪ್ರಾಂಶುಪಾಲೆ ಪ್ರತಿಮಾ ಬಾಳಿಗಾ ವಂದಿಸಿದರು.