ತುಂಬಾ ಆಘಾತಕಾರಿಯಾಗಿದೆ: ದರ್ಶನ್ ಮೇಲಿನ ಚಪ್ಪಲಿ ಎಸೆತ ಖಂಡಿಸಿದ ನಟ ಸುದೀಪ್

ಪುನೀತ್ ಬದುಕಿದ್ದಿದ್ದರೆ ಖಂಡಿತ ಬೇಸರ ಪಡುತ್ತಿದ್ದರು ಎಂದ ಅಭಿನಯ ಚಕ್ರವರ್ತಿ

Update: 2022-12-20 07:55 GMT

ಬೆಂಗಳೂರು, ಡಿ.20: 'ಕ್ರಾಂತಿ' ಚಿತ್ರ ತಂಡ, ಡಿ. 18ರಂದು ಹೊಸಪೇಟೆ ಪಟ್ಟಣದಲ್ಲಿ ಆಯೋಜಿಸಿದ್ದ ಚಿತ್ರದ ಪ್ರಚಾರ ಸಮಾರಂಭದಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿ ಎಂದು ಹೇಳಿಕೊಂಡಿರುವ ವ್ಯಕ್ತಿಯೋರ್ವ ದರ್ಶನ್‌ರೆಡೆಗೆ ಚಪ್ಪಲಿ ತೂರಿರುವ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕೃತ್ಯವನ್ನು ಪುನೀತ್ ರಾಜಕುಮಾರ್ ಅವರ ಹಿರಿಯ ಸಹೋದರ, ನಟ ಶಿವರಾಜ್ ಕುಮಾರ್ ಖಂಡಿಸಿದ್ದಾರೆ. ಇದರ ಬೆನ್ನಿಗೆ ಮತ್ತೊಬ್ಬ ನಟ ಸುದೀಪ್ ಕೂಡಾ ಘಟನೆಯನ್ನು ಖಂಡಿಸಿದ್ದು, ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ದೀರ್ಘವಾದ ಟಿಪ್ಪಣಿ ಬರೆದಿದ್ದಾರೆ. "ಒಂದು ವೇಳೆ ಪುನೀತ್ ರಾಜಕುಮಾರ್ ಬದುಕಿದ್ದಿದ್ದರೆ ಈ ಘಟನೆ ಬಗ್ಗೆ ಖಂಡಿತ ಬೇಸರ ಪಡುತ್ತಿದ್ದರು. ಪ್ರತಿಭಟನೆಯೇ ಯಾವಾಗಲೂ ಉತ್ತರವಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡಿ. 18ರಂದು ಹೊಸಪೇಟೆಯಲ್ಲಿ  'ಕ್ರಾಂತಿ' ಚಿತ್ರ ತಂಡ ಆಯೋಜಿಸಿದ್ದ ಪ್ರಚಾರ ಸಮಾರಂಭದಲ್ಲಿ ದರ್ಶನ್, ರಚಿತಾ ರಾಮ್ ಹಾಗೂ ಚಿತ್ರ ತಂಡದ ಸದಸ್ಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಾಡಿನ ತುಣುಕೊಂದನ್ನು ಬಿಡುಗಡೆಗೊಳಿಸಲಾಯಿತು. ನಂತರ ರಚಿತಾ ರಾಮ್ ಸಭಿಕರನ್ನುದ್ದೇಶಿಸಿ ಮಾತನಾಡುವಾಗ, ಗುಂಪೊಂದು "ಅಪ್ಪು, ಅಪ್ಪು" ಎಂದು ಘೋಷಣೆ ಕೂಗಿತಲ್ಲದೆ, ಗುಂಪಿನಲ್ಲಿದ್ದ ಓರ್ವ ವ್ಯಕ್ತಿ ದರ್ಶನ್‌ರೆಡೆಗೆ ಚಪ್ಪಲಿ ತೂರಿದ. ಆದರೆ, ಈ ಘಟನೆಯಿಂದ ಕೊಂಚವೂ ವಿಚಲಿತರಾಗದ ದರ್ಶನ್ ಸಮಾರಂಭದುದ್ದಕ್ಕೂ ತಮ್ಮ ತಾಳ್ಮೆಯನ್ನು ಕಾಯ್ದುಕೊಂಡರು ಮತ್ತು ಯಾವುದೇ ವಿವಾದಕ್ಕೆ ಆಸ್ಪದ ನೀಡದೆ ಸಮಾರಂಭವನ್ನು ಮುಕ್ತಾಯಗೊಳಿಸಿದರು.

ಈ ಕುರಿತು ಇಂದು (ಮಂಗಳವಾರ) ಟ್ವೀಟ್ ಮಾಡಿರುವ ನಟ ಸುದೀಪ್, "ನಾನು ನೋಡಿದ ವಿಡಿಯೊ ತುಂಬಾ ಆಘಾತಕಾರಿಯಾಗಿದೆ. ಅಲ್ಲಿ ಇನ್ನೂ ಹಲವಾರು ಮಂದಿಯಿದ್ದರು ಮತ್ತು ಚಿತ್ರದ ನಾಯಕಿ ಮಾತನಾಡಲು ನಿಂತಿದ್ದರು. ಅವರೆಲ್ಲ ಆ ಸಮಾರಂಭದ ಭಾಗ ಮಾತ್ರ ಆಗಿದ್ದರು ಮತ್ತು ಆ ಸಮಯದಲ್ಲಿ ಆಕ್ರೋಶ ವ್ಯಕ್ತಪಡಿಸುವಂತಹ ಯಾವ ಘಟನೆಯೂ ನಡೆಯಲಿಲ್ಲ. ಅವರನ್ನು ಸಾರ್ವಜನಿಕವಾಗಿ ಅಪಮಾನಗೊಳಿಸುವುದರಿಂದ, ನಾವು ಕನ್ನಡಿಗರು ಇಂತಹ ಅಸಮರ್ಥನೀಯ ಪ್ರತಿಕ್ರಿಯೆಗಳಿಗೆ ಹೆಸರಾಗಿದ್ದೇವೆಯೆ ಎಂಬ ಪ್ರಶ್ನೆ ಮೂಡಿಸುತ್ತದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

"ದರ್ಶನ್ ವಿಷಯಕ್ಕೆ ಬಂದಾಗ ಅವರ ಮತ್ತು ಪುನೀತ್ ಅಭಿಮಾನಿಗಳ ನಡುವಿನ ಸಂಬಂಧ ಅಷ್ಟು ಹಿತಕರವಾಗಿಲ್ಲ ಎಂಬ ಸಂಗತಿಯನ್ನು ನಾನು ಒಪ್ಪುತ್ತೇನೆ. ಆದರೆ, ಈ ಬಗೆಯ ಪ್ರತಿಕ್ರಿಯೆಯನ್ನು ಸ್ವಯಂ  ಪುನೀತ್ ಒಪ್ಪುತ್ತಿದ್ದರೆ ಮತ್ತು ಬೆಂಬಲಿಸುತ್ತಿದ್ದರೆ? ಅವರ ಅಭಿಮಾನಿಗಳೆಲ್ಲರೂ ಈ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳಬೇಕಿದೆ" ಎಂದು ಸಲಹೆ ನೀಡಿದ್ದಾರೆ.

Similar News