ಬಿಲ್ಕಿಸ್ ಬಾನು ಪ್ರಕರಣ: ಕ್ಷಮಾದಾನ ಸಮಿತಿಯ ಕಡತ ಟಿಪ್ಪಣಿಗಳನ್ನು ಹಂಚಿಕೊಳ್ಳಲು ಗುಜರಾತ್ ಸರಕಾರ ನಕಾರ

Update: 2022-12-20 15:46 GMT

ಅಹ್ಮದಾಬಾದ್: ಬಿಲ್ಕಿಸ್ ಬಾನು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ 11 ದೋಷಿಗಳ ಅವಧಿಪೂರ್ವ ಬಿಡುಗಡೆಗೆ ಕ್ಷಮಾದಾನ ಸಮಿತಿಯು ಮಾಡಿದ್ದ ಶಿಫಾರಸುಗಳ ಕಡತ ಟಿಪ್ಪಣಿಗಳನ್ನು ಹಂಚಿಕೊಳ್ಳಲು ಗುಜರಾತ್ ಸರಕಾರವು ನಿರಾಕರಿಸಿದೆ.

2002ರ ಪ್ರಕರಣದಲ್ಲಿ ದೋಷಿಗಳ ಬಿಡುಗಡೆ ಕುರಿತು ವಿವರಗಳನ್ನು ಒದಗಿಸುವಂತೆ ಕೋರಿ ಅಹ್ಮದಾಬಾದ್ ನ ಆರ್ಟಿಐ ಕಾರ್ಯಕರ್ತೆ ಪಂಕ್ತಿ ಜೋಗ್ ಅವರು ಆ.20ರಂದು ಆರ್ಟಿಐ ಕಾಯ್ದೆಯಡಿ ಅರ್ಜಿಯನ್ನು ಸಲ್ಲಿಸಿದ್ದರು. ಕಳೆದ ಐದು ವರ್ಷಗಳಲ್ಲಿ ಕ್ಷಮಾದಾನ ಸಮಿತಿಗಳ ವಿಚಾರಣಾ ನಿಬಂಧನೆಗಳು, ಈ ಸಮಿತಿಗಳ ಸಭೆಗಳ ನಡಾವಳಿಗಳು, ಕಾರಣಗಳ ಸಹಿತ ಬಿಡುಗಡೆಗಾಗಿ ಶಿಫಾರಸು ಮಾಡಲಾಗಿದ್ದ ಕೈದಿಗಳ ಹೆಸರುಗಳು ಮತ್ತು 75ನೇ ಸ್ವಾತಂತ್ರ ದಿನಾಚರಣೆ ಸಂದರ್ಭದಲ್ಲಿ ಕೈದಿಗಳ ಬಿಡುಗಡೆಗಾಗಿ ಕ್ಷಮಾದಾನ ಸಮಿತಿಗೆ ಸದಸ್ಯರ ಆಯ್ಕೆಯ ಮಾನದಂಡಗಳೊಂದಿಗೆ ಕಡತ ಟಿಪ್ಪಣಿಗಳನ್ನು ಅವರು ಕೇಳಿದ್ದರು.

ಜೋಗ್ ಅವರ ಪ್ರಶ್ನೆಗೆ ನೇರವಾಗಿ ಉತ್ತರಿಸುವ ಬದಲು ಗುಜರಾತ್ ಸರಕಾರವು ಕ್ಷಮಾದಾನ ಸಮಿತಿಗಳ ರಚನೆಗೆ ಸಂಬಂಧಿಸಿದ ರಾಜ್ಯ ಗೃಹ ಇಲಾಖೆಯ ನಿರ್ಣಯಗಳು ಮತ್ತು ದಾಖಲೆಗಳನ್ನು ಒದಗಿಸಿದೆ. ಆಜಾದಿ ಕಾ ಅಮೃತ ಮಹೋತ್ಸವದಡಿ ಮೂರು ಹಂತಗಳಲ್ಲಿ ಕೈದಿಗಳನ್ನು ಬಿಡುಗಡೆಗೊಳಿಸಲು ಸರಕಾರವು ನಿರ್ಧರಿಸಿದೆ ಎಂದು ಅದು ತಿಳಿಸಿದ್ದು ,2023 ಜ.26 ಮತ್ತು 2023 ಆ.15 ಉಳಿದ ಎರಡು ಹಂತಗಳಾಗಿವೆ. ತನ್ನ ಮೇ 13ರ ನಿರ್ಣಯಕ್ಕೆ ಅನುಗುಣವಾಗಿ ಕೈದಿಗಳ ಬಿಡುಗಡೆಯ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅದು ಹೇಳಿದೆ.

ಆಜಾದಿ ಕಾ ಅಮೃತ ಮಹೋತ್ಸವ ಯೋಜನೆಯ ಕುರಿತು ಕೇಂದ್ರದ ಮಾರ್ಗಸೂಚಿಗಳಡಿ ಕ್ಷಮಾದಾನ ಸಮಿತಿಗಳ ರಚನೆ ಮತ್ತು ಕ್ಷಮಾದಾನ ಪ್ರಕ್ರಿಯೆ ನಡೆದಿದೆ ಎಂದೂ ರಾಜ್ಯ ಗೃಹ ಇಲಾಖೆಯು ತಿಳಿಸಿದೆ.

Similar News