ಟೆಸ್ಟ್ ಸರಣಿ: ಪಾಕಿಸ್ತಾನದ ವಿರುದ್ಧ ಕ್ಲೀನ್‌ಸ್ವೀಪ್ ಸಾಧಿಸಿದ ಇಂಗ್ಲೆಂಡ್

ತವರು ನೆಲದಲ್ಲಿ ಬಾಬರ್ ಆಝಂ ಬಳಗಕ್ಕೆ ಮುಖಭಂಗ

Update: 2022-12-20 11:55 GMT

 ಕರಾಚಿ, ಡಿ.20: ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪಾಕ್ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಮಣಿಸಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ಪಾಕಿಸ್ತಾನ ನೆಲದಲ್ಲಿ ಐತಿಹಾಸಿಕ ಸರಣಿ ಕ್ಲೀನ್‌ಸ್ವೀಪ್ ಸಾಧಿಸಿತು.

2 ವಿಕೆಟ್ ನಷ್ಟಕ್ಕೆ 112 ರನ್‌ನಿಂದ ತನ್ನ 2ನೇ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ಮಂಗಳವಾರ ಗೆಲುವಿಗೆ 55 ರನ್ ಗಳಿಸಬೇಕಾಗಿತ್ತು. ಇಂಗ್ಲೆಂಡ್ ತಂಡ 2 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿ ಇನ್ನೂ ಒಂದು ದಿನದಾಟ ಬಾಕಿ ಇರುವಾಗಲೇ ಸತತ ಎರಡನೇ ಪಂದ್ಯವನ್ನು ಜಯಿಸಿತು. 17 ವರ್ಷಗಳ ಬಳಿಕ ಮೊದಲ ಬಾರಿ ಪಾಕಿಸ್ತಾನಕ್ಕೆ ಕ್ರಿಕೆಟ್ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್ ಸ್ಮರಣೀಯ ಸರಣಿ ಆಡಿತು.

ಪಾಕಿಸ್ತಾನ ಇದೇ ಮೊದಲ ಬಾರಿ ತನ್ನ ತವರು ನೆಲದಲ್ಲಿ 3 ಪಂದ್ಯಗಳ ಟೆಸ್ಟ್ ಸರಣಿಯನ್ನು 0-3 ಅಂತರದಿಂದ ಕಳೆದುಕೊಂಡು ಮುಖಭಂಗ ಅನುಭವಿಸಿತು.

ಇಂಗ್ಲೆಂಡ್‌ನ 18ರ ಹರೆಯದ ವೇಗಿ ರೆಹಾನ್ ಅಹ್ಮದ್(5-48)ದಾಳಿಗೆ ತತ್ತರಿಸಿದ ಪಾಕಿಸ್ತಾನ ತನ್ನ 2ನೇ ಇನಿಂಗ್ಸ್‌ನಲ್ಲಿ 216 ರನ್‌ಗೆ ಆಲೌಟಾಯಿತು. ಇಂಗ್ಲೆಂಡ್ ಗೆಲುವಿಗೆ 167 ರನ್ ಸಾಧಾರಣ ಗುರಿ ನೀಡಿತು.

ಔಟಾಗದೆ 50 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಬೆನ್ ಡಕೆಟ್ 78 ಎಸೆತಗಳಲ್ಲಿ ಔಟಾಗದೆ 82 ರನ್ ಗಳಿಸಿತು. ನಾಯಕ ಬೆನ್ ಸ್ಟೋಕ್ಸ್ ಔಟಾಗದೆ 35 ರನ್ ಗಳಿಸಿದರು.

ಪಾಕ್‌ ಸ್ಪಿನ್ನರ್ ಅಬ್ರಾರ್ ಅಹ್ಮದ್ ಸರಣಿಯಲ್ಲಿ 2 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 18 ವಿಕೆಟ್‌ಗಳನ್ನು ಕಬಳಿಸಿದರು. ಇಂಗ್ಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯವನ್ನು 74 ರನ್‌ನಿಂದ ಗೆದ್ದುಕೊಂಡರೆ, ಮುಲ್ತಾನ್‌ನಲ್ಲಿ ನಡೆದ 2ನೇ ಪಂದ್ಯವನ್ನು 26 ರನ್‌ನಿಂದ ರೋಚಕವಾಗಿ ಜಯಿಸಿತ್ತು.

Similar News