ಕುಂದಾಪುರ: ‘ನಂದಿನಿ ಸಿಹಿ ಉತ್ಸವ’ ಉದ್ಘಾಟನೆ
ಕುಂದಾಪುರ: ಇಲ್ಲಿನ ನ್ಯಾಯಾಲಯ ಸಂಕೀರ್ಣದ ಎದುರಿನಲ್ಲಿರುವ ನಂದಿನಿ ಮಾರಾಟ ಮಳಿಗೆಯಲ್ಲಿ ಸೋಮವಾರ ಕರ್ನಾಟಕ ಹಾಲು ಮಹಾ ಮಂಡಳಿಯ ಯೋಜನೆಯಂತೆ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವೂ ಆಯೋಜಿಸಿದ ‘ನಂದಿನಿ ಸಿಹಿ ಉತ್ಸವ’ದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ದಕ್ಷಿಣ ಕನ್ನಡ ಹಾಲು ಉತ್ಪಾದಕ ಮಹಾಮಂಡಳಿಯ ನಿರ್ದೇಶಕರಾದ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ನಂದಿನಿ ರೈತರ ಸಂಸ್ಥೆಯಾಗಿದ್ದು, ಉತ್ತಮ ಗುಣಮಟ್ಟದ ಉತ್ಪನ್ನಗಳು ಗ್ರಾಹಕರಿಗೆ ನೀಡುವುದಲ್ಲದೆ, ಕರ್ನಾಟಕ ರಾಜ್ಯದಾದ್ಯಂತ ನಂದಿನಿ ಸಿಹಿ ಉತ್ಸವ ಪ್ರಯುಕ್ತ ರಿಯಾಯತಿಯಲ್ಲಿ ನಂದಿನಿ ಶ್ರೇಣಿಯ ಸಿಹಿ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸಲು ಅವಕಾಶ ಕಲ್ಪಿಸಿದೆ. ಉತ್ಸವ ಕಾರ್ಯಕ್ರಮದಲ್ಲಿ ನಂದಿನಿ ಬ್ರಾಂಡಿನ ವಿವಿಧ ಹೊಸ ಹೊಸ ನೂತನ ಸಿಹಿ ಉತ್ಪನ್ನಗಳ ಅರಿವು ಮೂಡಿ ಸುವ ಸಲುವಾಗಿ ಸಿಹಿ ಉತ್ಸವ ಆಯೋಜಿಸಲಾಗಿದೆ ಎಂದರು.
ಕುಂದಾಪುರ ತಾಲೂಕು ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ್ ಹೆಗ್ಡೆ ಮಾತನಾಡಿ, ಯಾವುದೇ ರಾಸಾಯನಿಕಗಳನ್ನು ಉಪಯೋಗಿಸದೇ ಮಾಡುವ ನಂದಿನಿ ಸಿಹಿ ತಿಂಡಿಗಳನ್ನು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ನೀಡುವುದರಿಂದ ನಂದಿನಿ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸಬಹುದು. ಅಲ್ಲದೇ, ಪರೋಕ್ಷವಾಗಿ ರೈತರನ್ನೂ ಬೆಂಬಲಿಸಿದಂತಾಗುತ್ತದೆ ಎಂದರು.
ವಕೀಲರಾದ ಕಾಳಾವರ ಪ್ರದೀಪ್ ಶೆಟ್ಟಿ, ಕೋಟ ವ್ಯವಸಾಯ ಸಹಾಕಾರಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಕೊತ್ತಾಡಿ ಉದಯ್ ಕುಮಾರ ಶೆಟ್ಟಿ, ದಸ್ತಾವೇಜು ಬರಹಗಾರ ಬಾಬಣ್ಣ, ನಂದಿನಿ ಮಾರಾಟ ಮಳಿಗೆಯ ವಸಂತ ಶೆಟ್ಟಿ, ಇಂದಿರಾ ವಸಂತ ಶೆಟ್ಟಿ, ನಂದಿನಿ ಮಾರಾಟ ಮಳಿಗೆಯ ಮಾರುಕಟ್ಟೆ ಅಧಿಕಾರಿ ಧನುಷ್ ಕುಮಾರ್, ನಂದಿನಿ ವಿಸ್ತರಣಾಧಿಕಾರಿ ಉಮೇಶ್ ಕುಂದರ್ ಮತ್ತು ಆಡಳಿತ ಅಧೀಕ್ಷಕ ರಾಘವೇಂದ್ರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.