×
Ad

ಒಕ್ಕೂಟ ಸರ್ಕಾರ ಎಂದು ಉಲ್ಲೇಖಿಸುವ ಅಧಿಕಾರಿಗಳನ್ನು ಉತ್ತರ ಪ್ರದೇಶಕ್ಕೆ ವರ್ಗಾಯಿಸಲಾಗುವುದು: ತಮಿಳುನಾಡು ಬಿಜೆಪಿ ನಾಯಕ

Update: 2022-12-20 21:51 IST

ಚೆನ್ನೈ: ಕೇಂದ್ರ ಸರ್ಕಾರದ ಬದಲು ಒಕ್ಕೂಟ ಸರ್ಕಾರ ಎಂದು ಉಲ್ಲೇಖಿಸುವ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಬಿಜೆಪಿಯು ಮಧ್ಯಪ್ರದೇಶ ಅಥವಾ ಉತ್ತರ ಪ್ರದೇಶಕ್ಕೆ ವರ್ಗಾಯಿಸಲಿದೆ ಎಂದು ತಮಿಳುನಾಡಿನ ಬಿಜೆಪಿ ನಾಯಕ ಎಚ್. ರಾಜ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು The New Indian Express ವರದಿ ಮಾಡಿದೆ.

ಶನಿವಾರ ತೆಂಕಾಸಿಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ, ಒಂದು ವೇಳೆ ಅಧಿಕಾರಿಗಳು ಒಕ್ಕೂಟ ಸರ್ಕಾರ ಎಂದು ಉಲ್ಲೇಖಿಸಿದರೆ ಅಂತಹ ಅಧಿಕಾರಿಗಳಿಗೆ ಆದಿತ್ಯನಾಥ್ ಮತ್ತು ಬುಲ್ಡೋಜರ್ ಅನ್ನು ಎದುರಿಸುವಂತೆ ಮಾಡಲಾಗುವುದು ಎಂದು ಎಚ್.ರಾಜ ಹೇಳಿದ್ದಾರೆ. "ಅವರು ಸಂವಿಧಾನದ ಪ್ರಕಾರ ಒಕ್ಕೂಟ ಪದವನ್ನು ಬಳಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ನಾನು ಲೆಕ್ಕ ಪರಿಶೋಧಕ ಮಾತ್ರವಲ್ಲ; ವಕೀಲ ಕೂಡಾ. ರಾಜ್ಯಗಳ ಒಕ್ಕೂಟ ಎಂಬುದು ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳಿಗೆ ಅನ್ವಯಿಸುವುದಿಲ್ಲ" ಎಂದಿದ್ದಾರೆ.

2021ರಲ್ಲಿ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಸರ್ಕಾರ, ತನ್ನ ಅಧಿಕೃತ ಪತ್ರ ವ್ಯವಹಾರಗಳಲ್ಲಿ ಮತ್ತು ಪತ್ರಿಕಾ ಪ್ರಕಟಣೆಗಳಲ್ಲಿ ಈ ಹಿಂದಿನಂತೆ  ಕೇಂದ್ರ ಸರ್ಕಾರ ಎಂದು ಬಳಸುವ ಬದಲು ಭಾರತ ಸರ್ಕಾರವನ್ನು ತಮಿಳಿನಲ್ಲಿ 'ಒಂಡ್ರಿಯ ಅರಸು' (ಒಕ್ಕೂಟ ಸರ್ಕಾರ) ಎಂತಲೇ ಉಲ್ಲೇಖಿಸುತ್ತಿದೆ.

ತನ್ನ ನಡೆಯನ್ನು ಸಮರ್ಥಿಸಿಕೊಂಡಿರುವ ಡಿಎಂಕೆ ಸರ್ಕಾರ, ಸಾಂವಿಧಾನಿಕ ಸ್ಥಾನವನ್ನು ಸಮರ್ಪಕವಾಗಿ ಉಲ್ಲೇಖಿಸುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿತ್ತು. ಪಕ್ಷದ ನಾಯಕರ ಪ್ರಕಾರ, ಸಂವಿಧಾನದಲ್ಲಿ ಭಾರತವನ್ನು ಒಕ್ಕೂಟ ಸರ್ಕಾರ ಎಂದು ವಿವರಿಸಿರುವುದರಿಂದ ಕೇಂದ್ರ ಸರ್ಕಾರದ ಬದಲು ಒಕ್ಕೂಟ ಸರ್ಕಾರ ಎಂದು ಉಲ್ಲೇಖಿಸುವುದೇ ಸಮರ್ಪಕ ವಿಧಾನ ಎನ್ನುತ್ತಾರೆ.

ಆದರೆ, ಈ ನಡೆಯನ್ನು ವಿರೋಧಿಸಿದ್ದ ಬಿಜೆಪಿಯು, ಡಿಎಂಕೆ ನಡೆಯು ತಮಿಳುನಾಡನ್ನು ದೇಶದಿಂದ ವಿಭಜಿಸುವ ಪ್ರಕ್ರಿಯೆಯ ಪ್ರಾರಂಭ ಎಂದು ಆರೋಪಿಸಿತ್ತು.

ಸೇವಾನಿರತ ಐಎಎಸ್ ಅಧಿಕಾರಿಯೊಬ್ಬರು ಕೇಂದ್ರ ಸರ್ಕಾರದ ಬದಲು ಒಕ್ಕೂಟ ಸರ್ಕಾರ ಎಂದು ಉಲ್ಲೇಖಿಸುತ್ತಿದ್ದಾರೆ. ಅವರು ಇದೇ ಕೆಲಸವನ್ನು ಮಧ್ಯಪ್ರದೇಶದಲ್ಲೂ ಮಾಡಲಿ ನೋಡೋಣ ಎಂದು ಎಚ್.ರಾಜ ಸವಾಲು ಹಾಕಿದ್ದಾರೆ.

"ಆತ ಕೇಂದ್ರದ ಸೇವೆಯಲ್ಲಿದ್ದಾನೆ. ಮರುದಿನ ಆತನನ್ನು ಮಧ್ಯಪ್ರದೇಶಕ್ಕೆ ವರ್ಗಾಯಿಸಿದರೆ ಏನಾಗಬಹುದು ಊಹಿಸಿ! ಆತ ಅಲ್ಲಿಯೂ ಒಕ್ಕೂಟ ಸರ್ಕಾರ ಎಂದೇ ಬಳಸುತ್ತಾನೆಯೆ? ಆತನಿಗೆ ಯಾವುದೇ ನಾಚಿಕೆ ಇಲ್ಲವೆ?" ಎಂದು ಎಚ್.ರಾಜ ಹೇಳಿದ್ದಾರೆ ಎಂದು India Today ವರದಿ ಮಾಡಿದೆ.

ಒಕ್ಕೂಟ ಸರ್ಕಾರ ಎಂದು ಬಳಸುತ್ತಿರುವವರು ದೇಶದ್ರೋಹಿಗಳಾಗಿದ್ದು, ತಮಿಳುನಾಡು ರಾಷ್ಟ್ರೀಯತೆ ಬಗ್ಗೆ ಚರ್ಚಿಸುತ್ತಿರುವವರನ್ನು ಗೂಂಡಾ ಕಾಯ್ದೆ ಅಡಿ ಜೈಲಿಗೆ ಹಾಕಬೇಕು ಎಂದು ಎಚ್‌.ರಾಜ ಕಿಡಿ ಕಾರಿದ್ದಾರೆ ಎಂದು The New Indian Express ವರದಿ ಮಾಡಿದೆ.

Similar News