×
Ad

ಮೇಲ್ಜಾತಿಯ ಆರ್ಥಿಕ ಮೀಸಲಾತಿ ಫಲಾನುಭವಿಗಳ ಸಮೀಕ್ಷೆ ಇಲ್ಲ: ಕೇಂದ್ರ

Update: 2022-12-21 22:30 IST

ಹೊಸದಿಲ್ಲಿ,ಡಿ.21: ಮೇಲ್ಜಾತಿಯ ಆರ್ಥಿಕ ದುರ್ಬಲ ವರ್ಗಗಳ ಮೀಸಲಾತಿ (IWS)ಗೆ ಅರ್ಹರಾದ ಫಲಾನುಭವಿಗಳ ಸಂಖ್ಯೆಯನ್ನು ಗುರುತಿಸಲು ಯಾವುದೇ ಸಮೀಕ್ಷೆಯನ್ನು ಸರಕಾರ ನಡೆಸಿಲ್ಲ ಹಾಗೂ ಆ ಬಗ್ಗೆ ಯೋಚನೆಯನ್ನು ಕೂಡಾ ಹೊಂದಿಲ್ಲವೆಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆಯ ಸಹಾಯಕ ಸಚಿವೆ ಪ್ರತಿಮಾ ಭೌಮಿಕ್(Pratima Bhowmik) ಲೋಕಸಭೆಗೆ ತಿಳಿಸಿದ್ದಾರೆ.

ಇಡಬ್ಲ್ಯುಎಸ್ ಮೀಸಲಾತಿಯ ಫಲಾನುಭವಿಗಳಿಗೆ ಆರ್ಥಿಕ ದುರ್ಬಲ ವರ್ಗಗಳ ಪ್ರಮಾಣಪತ್ರವನ್ನು ವಿತರಿಸುವಂತೆಯೂ ಕೇಂದ್ರ ಸರಕಾರವು ರಾಜ್ಯ ಸರಕಾರಗಳಿಗೆ ನಿರ್ದೇಶಗಳನ್ನು ನೀಡಿರುವುದಾಗಿ, ಸಚಿವ ಭೌಮಿಕ್ ಅವರು ಟಿಎಂಸಿ ಸಂಸದ ಸಜ್‌ದಾ ಅಹ್ಮದ್(Sajda Ahmed) ಅವರಿಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದರು.

ಇಡಬ್ಲ್ಯುಎಸ್ ಕೋಟಾದಡಿ ಫಲಾನುಭವಿಗಳ ಸಂಖ್ಯೆಯನ್ನು ಅಂದಾಜಿಸಲು ನೀತಿ ಆಯೋಗದ ಬಡತನ ಸೂಚ್ಯಂಕದ ದತ್ತಾಂಶವನ್ನು ತಾನು ಅವಲಂಭಿಸಿರುವುದಾಗಿ ಕೇಂದ್ರ ಸರಕಾರವು ಈ ಹಿಂದೆ ಇಡಬ್ಲ್ಯುಎಸ್ ಮೀಸಲಾತಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ಸಂದರ್ಭ ತಿಳಿಸಿತ್ತು.

ಕೇಂದ್ರ ಸರಕಾರದ ಹೇಳಿಕೆಯ ಪ್ರಕಾರ, ಸಾಮಾನ್ಯ ಶ್ರೇಣಿ ಜಾತಿಗಳ ಒಟ್ಟು ಜನಸಂಖ್ಯೆಯ ಶೇ.18.2ರಷ್ಟು ಮಂದಿ ಅಥವಾ 3.5 ಕೋಟಿ ಮಂದಿ ಆರ್ಥಿಕ ದುರ್ಬಲ ಮೀಸಲಾತಿಗೆ ಶ್ರೇಣಿಯ ವ್ಯಾಪ್ತಿಗೊಳಪಡುತ್ತಾರೆ.

ಪರಿಶಿಷ್ಟಜಾತಿ, ಪಂಗಡ ಮೀಸಲಾತಿ ಹಾಗೂ ಓಬಿಸಿ ಮೀಸಲಾತಿ ದೊರೆಯದ ಹಾಗೂ ವಾರ್ಷಿಕವಾಗಿ 8 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಕುಟುಂಬಗಳಿಗೆ ಸೇರಿದವರಿಗೆ ಆರ್ಥಿಕ ದುರ್ಬಲ ವರ್ಗಗಳ ಮೀಸಲಾತಿಯನ್ನು ಕೇಂದ್ರ ಸರಕಾರವು 2019ರಲ್ಲಿ ಜಾರಿಗೊಳಿಸಿತ್ತು.

ಆದಾಗ್ಯೂ 5 ಎಕರೆಗಿಂತ ಅಧಿಕ ಕೃಷಿಭೂಮಿಇರುವ ಹಾಗೂ 1 ಸಾವಿರ ಚದರ ಅಡಿ ವಸತಿ ನಿವೇಶನವಿರುವ ಕುಟುಂಬಗಳ ವ್ಯಕ್ತಿಗಳು ಕೂಡಾ ಇಡಬ್ಲ್ಯುಎಸ್ ಮೀಸಲಾತಿಗೆ ಅರ್ಹರಾಗುವುದಿಲ್ಲವೆದು ಕೇಂದ್ರ ಸರಕಾರವು ತಿಳಿಸಿದೆ.

Similar News