​ಚೀನಾದಲ್ಲಿ ಅಬ್ಬರಿಸಿದ ಬಿಎಫ್.7 ವೈರಸ್ ಭಾರತದಲ್ಲೂ ಪತ್ತೆ!

Update: 2022-12-22 06:50 GMT

ಹೊಸದಿಲ್ಲಿ: ಚೀನಾದಲ್ಲಿ ಕೋವಿಡ್-19 ಸೋಂಕು ದಿಢೀರನೇ ಉಲ್ಬಣಗೊಳ್ಳಲು ಕಾರಣವಾದ ಬಿಎಫ್.7 ಪ್ರಬೇಧದ ವೈರಸ್‌ನ ನಾಲ್ಕು ಪ್ರಕರಣಗಳು ಭಾರತದಲ್ಲೂ ಪತ್ತೆಯಾಗಿವೆ. ಒಮಿಕ್ರಾನ್ ಪ್ರಬೇಧದ ಉಪಪ್ರಬೇಧವಾಗಿರುವ ಬಿಎಫ್.7 ವೈರಸ್, ಚೀನಾದಲ್ಲಿ ಕಳೆದ ಜುಲೈನಿಂದ ಪ್ರಕರಣಗಳು ಹೆಚ್ಚಲು ಕಾರಣವಾಗಿವೆ ಎಂದು ಉನ್ನತ ಮೂಲಗಳು ಹೇಳಿವೆ. ಈ ಪೈಕಿ ಮೂರು ಪ್ರಕರಣಗಳು ಗುಜರತ್‌ನಲ್ಲಿ ಹಾಗೂ ಒಂದು ಪ್ರಕರಣ ಒಡಿಶಾದಲ್ಲಿ ಪತ್ತೆಯಾಗಿದೆ. ಈ ಎಲ್ಲ ನಾಲ್ಕು ಮಂದಿ ರೋಗಿಗಳಲ್ಲಿ ಸೌಮ್ಯಸ್ವರೂಪದ ರೋಗಲಕ್ಷಣ ಕಾಣಿಸಿಕೊಂಡಿದೆ ಅಥವಾ ಯಾವುದೇ ರೋಗಲಕ್ಷಣ ಕಾಣಿಸಿಕೊಂಡಿಲ್ಲ. ಎಲ್ಲರೂ ಈಗ ಚೇತರಿಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಪ್ರಕರಣಗಳನ್ನು ಉಭಯ ರಾಜ್ಯಗಳ ಆರೋಗ್ಯ ಇಲಾಖೆಗಳು ದೃಢಪಡಿಸಿವೆ. ಗುಜರಾತ್ ಆರೋಗ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಇಬ್ಬರು ರೋಗಿಗಳು ಅಹ್ಮದಾಬಾದ್‌ನ ಸ್ಥಳೀಯರು. ವಡೋದರದ ಇನ್ನೊಬ್ಬ ರೋಗಿ ಅಮೆರಿಕದಿಂದ ಆಗಮಿಸಿದ ಅನಿವಾಸಿ ಭಾರತೀಯ. ಈ ಪ್ರಕರಣಗಳು ಜುಲೈ, ಸೆಪ್ಟೆಂಬರ್ ಹಾಗೂ ನವೆಂಬರ್‌ನಲ್ಲಿ ಪತ್ತೆಯಾಗಿವೆ.

ಮೊದಲ ಇಬ್ಬರು ರೋಗಿಗಳಿಗೆ ಕಫ ಮತ್ತು ಜ್ವರ ಕಾಣಿಸಿಕೊಂಡಿದೆ. ಎರಡನೇ ರೋಗಿಯ ನಿಕಟ ಸಂಪರ್ಕದಲ್ಲಿದ್ದವರಿಗೆ ಯಾವುದೇ ರೋಗಲಕ್ಷಣ ಕಾಣಿಸಿಕೊಂಡಿಲ್ಲ. ಮೂರನೇ ರೋಗಿಯ ನಿಕಟ ಸಂಪರ್ಕ ಹೊಂದಿದ್ದವರಲ್ಲೂ ಯಾವುದೇ ರೋಗಲಕ್ಷಣ ಕಾಣಿಸಿಕೊಂಡಿಲ್ಲ. ಒಡಿಶಾದಲ್ಲಿ ಪತ್ತೆಯಾದ ಪ್ರಕರಣದಲ್ಲಿ 57 ವರ್ಷದ ಮಹಿಳೆಗೆ ಬಿಎಫ್.7 ಸೋಂಕು ತಗುಲಿದ್ದು, ಯಾವುದೇ ರೋಗಲಕ್ಷಣ ಇರಲಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ತಜ್ಞರು ಹೇಳುವ ಪ್ರಕಾರ, ಬಿಎಫ್.7 ಉಪಪ್ರಬೇಧದ ವೈರಸ್, ಚೀನಾ, ಜಪಾನ್, ದಕ್ಷಿಣ ಕೊರೊಯಾದಂಥ ದೇಶಗಳಲ್ಲಿ ಕೋವಿಡ್ ಸೋಂಕು ಗಣನೀಯವಾಗಿ ಹೆಚ್ಚಲು ಕಾರಣವಾಗಿದೆ.

Similar News