ಉತ್ತರ ಪ್ರದೇಶ: 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ 'ವಿಚಿತ್ರ ವಿನ್ಯಾಸದ' ಸಾರ್ವಜನಿಕ ಶೌಚಾಲಯದ ಚಿತ್ರ ವೈರಲ್

ಅಧಿಕಾರಿಗಳಿಗೆ ಸ್ಪಷ್ಟನೆ ನೀಡಲು ಸೂಚನೆ

Update: 2022-12-22 10:12 GMT

ಬಸ್ತಿ: ತನ್ನ ವಿಚಿತ್ರ ವಿನ್ಯಾಸದ ಕಾರಣಕ್ಕೆ ಉತ್ತರ ಪ್ರದೇಶದಲ್ಲಿನ ಸಾರ್ವಜನಿಕ ಶೌಚಾಲಯದ ಚಿತ್ರವೊಂದು ಮಾಧ್ಯಮಗಳ ತಲೆಬರಹದಲ್ಲಿ ಸ್ಥಾನ ಪಡೆದಿದ್ದು, ಒಂದೇ ಶೌಚಾಲಯ ಕೊಠಡಿಯಲ್ಲಿ ಯಾವುದೇ ಅಡ್ಡಗೋಡೆ ನಿರ್ಮಿಸದೆ ಎರಡು ಶೌಚಾಸನಗಳನ್ನು ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ.

ಬಸ್ತಿ ಜಿಲ್ಲೆಯ ಗೌರಾ ಧುಂಢ ಗ್ರಾಮದಲ್ಲಿ ನಿರ್ಮಿಸಲಾಗಿರುವ ಈ ಸಾರ್ವಜನಿಕ ಶೌಚಾಲಯ ಸಂಕೀರ್ಣದ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, 'ಮರ್ಯಾದಾ ಮನೆ' (ಇಜ್ಜತ್ ಘರ್) ಹೆಸರಿನಲ್ಲಿ ನಿರ್ಮಾಣಗೊಂಡಿರುವ ಈ ಶೌಚಾಲಯ ಸಂಕೀರ್ಣ ಕಾಮಗಾರಿಗೆ ರೂ. 10 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಹೇಳಲಾಗಿದೆ.

ಈ ಮರ್ಯಾದಾ ಮನೆ ಶೌಚಾಲಯದ ಕೆಲವು ಕೋಣೆಗಳಲ್ಲಿ ಅಡ್ಡಗೋಡೆ ನಿರ್ಮಿಸದೆ ಎರಡು ಶೌಚಾಸನಗಳನ್ನು ಹಾಕಲಾಗಿದ್ದರೆ, ಮತ್ತೆ ಕೆಲವು ಕೊಠಡಿಗಳಿಗೆ ಬಾಗಿಲುಗಳೇ ಇಲ್ಲ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಡಳಿತ, ವಿಷಯದ ಕುರಿತು ತನಿಖೆ ಕೈಗೊಳ್ಳಲಾಗಿದೆ. ಶೌಚಾಲಯ ಕೊಠಡಿಗಳಿಗೆ ಏಕೆ ಬಾಗಿಲುಗಳನ್ನು ಅಳವಡಿಸಿಲ್ಲ ಹಾಗೂ ಕೆಲವು ಕೊಠಡಿಗಳಲ್ಲಿ ಅಡ್ಡಗೋಡೆ ನಿರ್ಮಿಸದೆ ಏಕೆ ಎರಡು ಶೌಚಾಸನಗಳನ್ನು ಹಾಕಲಾಗಿದೆ ಎಂಬುದರ ಕುರಿತು ಸಂಬಂಧಿತ ಪ್ರಾಧಿಕಾರಗಳಿಂದ ಸ್ಪಷ್ಟನೆ ಕೋರಲಾಗಿದೆ ಎಂದು ತಿಳಿಸಿದೆ ಎಂದು ndtv.com ವರದಿ ಮಾಡಿದೆ.

Similar News