ಕಾರ್ಮಿಕ ಹಕ್ಕುಗಳ ಕಾರ್ಯಕರ್ತ ಶಿವಕುಮಾರರನ್ನು ಅಕ್ರಮವಾಗಿ ಬಂಧಿಸಿ, ಚಿತ್ರಹಿಂಸೆ ನೀಡಲಾಗಿತ್ತು: ತನಿಖಾ ವರದಿ

Update: 2022-12-22 11:25 GMT

ಹೊಸದಿಲ್ಲಿ: ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ಆದೇಶಿಸಿದ್ದ ತನಿಖೆಯ ವರದಿಯು ಜನವರಿ 2021ರಲ್ಲಿ ದಿಲ್ಲಿ ಗಡಿಯಲ್ಲಿ ರೈತರ ಪ್ರತಿಭಟನೆಗಳ ಸಂದರ್ಭ ಸೋನೆಪತ್ ಪೊಲೀಸರು ಕಾರ್ಮಿಕ ಹಕ್ಕುಗಳ ಕಾರ್ಯಕರ್ತ ಶಿವಕುಮಾರ್ ಅವರನ್ನು ಅಕ್ರಮವಾಗಿ ಬಂಧಿಸಿದ್ದರು ಮತ್ತು ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ್ದರು ಎನ್ನುವುದನ್ನು ಎತ್ತಿ ಹಿಡಿದಿದೆ.

ಕುಮಾರ ತಂದೆ ರಾಜಬೀರ ಸಿಂಗ್ ಅವರು ಸಿಬಿಐ ತನಿಖೆಯನ್ನು ಕೋರಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಕುಮಾರ ಅವರ ಕೈ ಮತ್ತು ಪಾದದ ಎರಡು ಮೂಳೆಗಳು ಮುರಿದಿವೆ ಮತ್ತು ಕಾಲ್ಬೆರಳುಗಳ ಉಗುರುಗಳಿಗೆ ಹಾನಿಯುಂಟಾಗಿದೆ ಎಂದು ಚಂಡಿಗಡದ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆ (ಜಿಎಂಎಚ್ಸಿ)ಯಲ್ಲಿ ನಡೆಸಲಾದ ತಪಾಸಣೆಯ ವರದಿ ಬೆಟ್ಟು ಮಾಡಿದ್ದನ್ನು ಗಮನಿಸಿದ ಉಚ್ಚ ನ್ಯಾಯಾಲಯವು ಮಾರ್ಚ್ 2021ರಲ್ಲಿ ತನ್ನ ಉಸ್ತುವಾರಿಯಡಿ ತನಿಖೆಗೆ ಆದೇಶಿಸಿತ್ತು.

ಜಿಎಂಎಚ್ಸಿ ವರದಿಯು ಒಟ್ಟು ಏಳು ಗಾಯಗಳನ್ನು ಪಟ್ಟಿ ಮಾಡಿದ್ದು,ಈ ಪೈಕಿ ಮೊಂಡಾದ ವಸ್ತುವಿನ ಹೊಡೆತದಿಂದ ಉಂಟಾಗಿದ್ದ ಎರಡು ಗಾಯಗಳು ತೀವ್ರ ಸ್ವರೂಪದ್ದಾಗಿದ್ದವು. 

ವರದಿಯು ಸೋನೆಪತ್ ನ ವೈದ್ಯರು ಸಿದ್ಧಪಡಿಸಿದ್ದ ವರದಿಗೆ ವ್ಯತಿರಿಕ್ತವಾಗಿತ್ತು. ಪೊಲೀಸರ ಹೇಳಿಕೆಯಂತೆ ಮಜದೂರ್ ಅಧಿಕಾರ ಸಂಘಟನೆಯ ಅಧ್ಯಕ್ಷ ಕುಮಾರರನ್ನು ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಗಳ ಸಂದರ್ಭ ಸೋನೆಪತ್ನ ಕೈಗಾರಿಕಾ ಘಟಕಗಳಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. 

ರೈತರೊಂದಿಗೆ ಏಕತೆ ಪ್ರದರ್ಶಿಸಿದ್ದ ಮತ್ತು ಅವರ ಬೆಂಬಲಕ್ಕಾಗಿ ಕಾರ್ಮಿಕರನ್ನು ಕ್ರೋಡೀಕರಿಸುತ್ತಿದ್ದ ನಾಯಕರಲ್ಲಿ ಕುಮಾರ್ ಓರ್ವರಾಗಿದ್ದರು. ವರದಿಯಂತೆ ಪೊಲೀಸರು ಜ.16ರಂದು ಕುಮಾರರನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಮುನ್ನ ಏಳು ದಿನಗಳ ಕಾಲ ಅಕ್ರಮವಾಗಿ ಕಸ್ಟಡಿಯಲ್ಲಿಟ್ಟಿದ್ದರು. 

ಈ ಅವಧಿಯಲ್ಲಿ ಮತ್ತು ನಂತರ ನ್ಯಾಯಾಲಯದ ಆದೇಶದ ಮೇರೆಗೆ ಪೊಲಿಸ್ ಕಸ್ಟಡಿಯಲ್ಲಿದ್ದಾಗ ಅವರಿಗೆ ಚಿತ್ರಹಿಂಸೆ ನೀಡಲಾಗಿತ್ತು ಎಂದು ಫರೀದಾಬಾದ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಹಾಗೂ ಹಾಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ದೀಪಕ ಗುಪ್ತಾ ಅವರ ವರದಿಯು ಹೇಳಿದೆ.

ಸೋನೆಪತ್ ಸರಕಾರಿ ಆಸ್ಪತ್ರೆಯ ವೈದ್ಯರು ಮತ್ತು ಜೈಲು ವೈದ್ಯಾಧಿಕಾರಿಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸಿರಲಿಲ್ಲ ಮತ್ತು ಪೊಲೀಸ್ ಅಧಿಕಾರಿಗಳ ತಾಳಕ್ಕೆ ತಕ್ಕಂತೆ ಕುಣಿದಿದ್ದರು. ಪೊಲೀಸ್ ಅಧಿಕಾರಿಗಳ ಸೂಚನೆಯ ಮೇರೆಗೆ ಅವರು ವರದಿಯನ್ನು ಸಿದ್ಧಪಡಿಸಿದ್ದರು ಎಂದು ವರದಿಯು ಹೇಳಿದೆ. 

ಸೋನೆಪತ್ನ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ವಿನಯ ಕಕ್ರಾನ್ ಅವರೂ ತನ್ನ ಕರ್ತವ್ಯವನ್ನು ನಿಭಾಯಿಸಿದ್ದು ಕಂಡು ಬಂದಿಲ್ಲ. ಸೋನೆಪತ್ನ ಕುಂಡ್ಲಿಯ ಹೆಚ್ಚುವರಿ ಠಾಣಾಧಿಕಾರಿ ಶಂಶೇರ್ ಸಿಂಗ್ ಮತ್ತು ಅವರ ಸಹ ಅಧಿಕಾರಿಗಳು ಕುಮಾರ ಮೇಲೆ ನಡೆದ ಹಿಂಸಾಚಾರಕ್ಕೆ ನೇರ ಹೊಣೆಗಾರರಾಗಿದ್ದಾರೆ ಎಂದೂ ವರದಿಯು ತಿಳಿಸಿದೆ.

Similar News