ಕೆಲಸಕ್ಕೆ ವಾಪಸಾಗಿ ಇಲ್ಲವೇ ವೇತನ ಕಳೆದುಕೊಳ್ಳಲು ಸಿದ್ಧರಾಗಿ: ಪ್ರತಿಭಟನಾನಿರತ ಕಾಶ್ಮೀರಿ ಪಂಡಿತರಿಗೆ ಆಡಳಿತ ಎಚ್ಚರಿಕೆ

Update: 2022-12-22 13:14 GMT

ಜಮ್ಮು,ಡಿ.22: ತವರು ಜಿಲ್ಲೆಗೆ ವರ್ಗಾವಣೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಕಾಶ್ಮೀರ ಕಣಿವೆಯಲ್ಲಿ ನಿಯೋಜಿತ ಕಾಶ್ಮೀರಿ ಪಂಡಿತ ನೌಕರರಿಗೆ ಕೆಲಸಕ್ಕೆ ಮರಳುವಂತೆ ಸ್ಪಷ್ಟ ಸಂದೇಶವನ್ನು ರವಾನಿಸಿರುವ ಜಮ್ಮು-ಕಾಶ್ಮೀರದ ಉಪ ರಾಜ್ಯಪಾಲ ಮನೋಜ ಸಿನ್ಹಾ ಅವರು,ಮನೆಯಲ್ಲಿ ಕುಳಿತುಕೊಳ್ಳುವದಕ್ಕೆ ವೇತನಗಳನ್ನು ನೀಡಲಾಗುವುದಿಲ್ಲ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಉಗ್ರಗಾಮಿಗಳಿಂದ ತಮ್ಮ ಸಮುದಾಯದವರ ಉದ್ದೇಶಿತ ಹತ್ಯೆಗಳ ಬಳಿಕ ಕಳೆದ ಮೇ ತಿಂಗಳಲ್ಲಿ ಕಾಶ್ಮೀರ ಕಣಿವೆಯನ್ನು ತೊರೆದಿದ್ದ ಪಂಡಿತ ನೌಕರರು ಪ್ರಧಾನ ಮಂತ್ರಿ ವಿಶೇಷ ಉದ್ಯೋಗ ಯೋಜನೆಯಡಿ ಕಣಿವೆಗೆ ಮರಳಿದ್ದಾರಾದರೂ ಕಳೆದ ಆರು ತಿಂಗಳುಗಳಿಂದ ಕೆಲಸಕ್ಕೆ ಹಾಜರಾಗುತ್ತಿಲ್ಲ. ಪ್ರತಿಭಟನೆಯಲ್ಲಿ ತೊಡಗಿರುವ ಅವರು,ಉಗ್ರರ ಉದ್ದೇಶಿತ ದಾಳಿಗಳ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಗಳ ಕೊರತೆಯಿಂದಾಗಿ ತಮ್ಮನ್ನು ಕಣಿವೆಯಿಂದ ಹೊರಗೆ ವರ್ಗಾಯಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

 ಕಾಶ್ಮೀರಿ ನೌಕರರ ಎಲ್ಲ ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದೆ ಮತ್ತು ಅವರನ್ನು ಜಮ್ಮುವಿಗೆ ಮರುವರ್ಗಾವಣೆಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭ ಸ್ಪಷ್ಟವಾಗಿ ಹೇಳಿದ ಸಿನ್ಹಾ,‘ಪ್ರತಿಭಟನಾನಿರತರ ಆ.31ರವರೆಗಿನ ವೇತನಗಳನ್ನು ನಾವು ಪಾವತಿಸಿದ್ದೇವೆ,ಆದರೆ ಅವರು ಮನೆಗಳಲ್ಲಿ ಕುಳಿತಿದ್ದಕ್ಕಾಗಿ ಅವರಿಗೆ ವೇತನಗಳನ್ನು ಪಾವತಿಸಲು ಸಾಧ್ಯವಿಲ್ಲ. ಇದು ಅವರಿಗೆ ಸ್ಪಷ್ಟವಾದ ಸಂದೇಶವಾಗಿದೆ. ಅವರು ಇದನ್ನು ಆಲಿಸಬೇಕು ಮತ್ತು ಅರ್ಥ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಭವಿಷ್ಯದಲ್ಲಿ ಉಗ್ರರ ಯಾವುದೇ ದಾಳಿಗಳಿಂದ ಪಂಡಿತ ನೌಕರರನ್ನು ರಕ್ಷಿಸಲು ಎಲ್ಲ ಭದ್ರತಾ ವ್ಯವಸ್ಥೆಗಳು ಜಾರಿಯಲ್ಲಿವೆ ಎಂದು ಒತ್ತಿ ಹೇಳಿದ ಸಿನ್ಹಾ,ಕಣಿವೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಪಂಡಿತ ನೌಕರರನ್ನು ಈಗಾಗಲೇ ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರನ್ನು ಈಗಾಗಲೇ ತಾಲೂಕು ಮತ್ತು ಜಿಲ್ಲಾ ಕೇಂದ್ರಕ್ಕೆ ಸಮೀಪದ ಗ್ರಾಮಗಳಿಗೆ ನಿಯೋಜಿಸಲಾಗಿದೆ ಎಂದರು.
ಜಮ್ಮು-ಕಾಶ್ಮೀರ ಆಡಳಿತವು ಕಾಶ್ಮೀರಿ ಪಂಡಿತರ ಕುಂದುಕೊರತೆಗಳನ್ನು ಪರಿಶೀಲಿಸಲು ಪ್ರತಿ ಜಿಲ್ಲೆಯಲ್ಲಿ ಮತ್ತು ರಾಜಭವನದಲ್ಲಿ ಅಧಿಕಾರಿಗಳನ್ನು ನೇಮಕಗೊಳಿಸಿದೆ ಎಂದು ಸಿನ್ಹಾ ತಿಳಿಸಿದರು.

ಸಿನ್ಹಾ ಹೇಳಿಕೆಯ ಬಳಿಕ ವಲಸಿಗ ಕಾಶ್ಮೀರಿ ಪಂಡಿತ ಉದ್ಯೋಗಿಗಳು ಕಳೆದ ಮೂರು ತಿಂಗಳುಗಳಿಂದ ಕಣಿವೆಯಿಂದ ವರ್ಗಾವಣೆಗೆ ಆಗ್ರಹಿಸಿ ತಾವು ನಡೆಸುತ್ತಿರುವ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.

ಲಷ್ಕರೆ ತೈಬಾದೊಂದಿಗೆ ಗುರುತಿಸಿಕೊಂಡಿರುವ ಉಗ್ರವಾದಿ ಸಂಘಟನೆಯು ಕಾಶ್ಮೀರಿ ಪಂಡಿತ ಉದ್ಯೋಗಿಗಳ ಹಿಟ್ ಲಿಸ್ಟ್ಗಳನ್ನು ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆಯ ಅನುಪಸ್ಥಿತಿಯಲ್ಲಿ ತಾವು ಕಣಿವೆಯಲ್ಲಿ ತಮ್ಮ ಕೆಲಸಗಳಿಗೆ ಮರಳುವುದಿಲ್ಲ. ಹೀಗಾಗಿ ತಮ್ಮನ್ನು ಸೇವೆಗಳಿಂದ ವಜಾಗೊಳಿಸುವುದು ಸರಕಾರಕ್ಕೆ ಉತ್ತಮ ಆಯ್ಕೆಯಾಗಿದೆ ಎಂದು ಜಮ್ಮುವಿನ ಪ್ರೆಸ್ ಕ್ಲಬ್ನೆದುರು ಪ್ರತಿಭಟನೆಯನ್ನು ನಡೆಸುತ್ತಿದ್ದ ಕಾಶ್ಮೀರಿ ಪಂಡಿತರು ಹೇಳಿದರು.

Similar News