ವೈವಾಹಿಕ ಅತ್ಯಾಚಾರ ಪ್ರಕರಣ: ಸುಪ್ರೀಂಕೋರ್ಟ್ ನಲ್ಲಿ ಆರೋಪಿಯ ವಿಚಾರಣೆಗೆ ಕರ್ನಾಟಕದ ಬೆಂಬಲ
ಹೊಸದಿಲ್ಲಿ,ಡಿ.22: ಬಿಜೆಪಿ(BJP) ನೇತೃತ್ವದ ಕರ್ನಾಟಕ ರಾಜ್ಯ ಸರಕಾರವು ಸರ್ವೋಚ್ಚ ನ್ಯಾಯಾಲಯ(Supreme Court)ಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತನ್ನ ಪತ್ನಿಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಯ ವಿರುದ್ಧ ಕಾನೂನು ಕ್ರಮವನ್ನು ಬೆಂಬಲಿಸಿದೆ.
ರಾಜ್ಯ ಸರಕಾರದ ನಿಲುವು ವೈವಾಹಿಕ ಅತ್ಯಾಚಾರದ ಅಪರಾಧೀಕರಣವನ್ನು ಹಲವಾರು ಸಂದರ್ಭಗಳಲ್ಲಿ ವಿರೋಧಿಸಿರುವ ಕೇಂದ್ರದ ನಿಲುವಿಗಿಂತ ಭಿನ್ನವಾಗಿದೆ. ಈ ವಿಷಯದ ಕುರಿತು ವ್ಯಾಪಕ ಸಮಾಲೋಚನೆಗಳ ಅಗತ್ಯವಿದೆ ಎನ್ನುವುದು ಕೇಂದ್ರದ ಪ್ರತಿಪಾದನೆಯಾಗಿದೆ.
ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಆರೋಪಿಯು ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ನೋಟಿಸ್‌ಗೆ ಉತ್ತರವಾಗಿ ರಾಜ್ಯ ಸರಕಾರವು ಅಫಿಡವಿಟ್ ಸಲ್ಲಿಸಿದೆ.
ಮಾ.23ರಂದು ಕರ್ನಾಟಕ ಉಚ್ಚ ನ್ಯಾಯಾಲಯವು ಆರೋಪಿಯ ವಿರುದ್ಧದ ಅತ್ಯಾಚಾರ ಆರೋಪಗಳನ್ನು ರದ್ದುಗೊಳಿಸಲು ನಿರಾಕರಿಸಿತ್ತು.
ಅತ್ಯಾಚಾರ ಕಾನೂನಿಗೆ ವಿನಾಯಿತಿ 2ರಂತೆ ಅತ್ಯಾಚಾರಕ್ಕಾಗಿ ತನ್ನ ವಿರುದ್ಧ ಕಾನೂನು ಕ್ರಮ ಜರುಗಿಸುವಂತಿಲ್ಲ ಎಂದು ಸಂತ್ರಸ್ತ ಮಹಿಳೆಯ ಪತಿ ವಾದಿಸಿದ್ದ. ಪತ್ನಿಯು 15 ವರ್ಷಕ್ಕಿಂತ ಕೆಳಗಿನ ಪ್ರಾಯದವಳಲ್ಲದಿದ್ದರೆ ಆಕೆಯೊಂದಿಗೆ ಪತಿಯ ಬಲವಂತದ ಲೈಂಗಿಕ ಕ್ರಿಯೆಯು ಅತ್ಯಾಚಾರವಾಗುವುದಿಲ್ಲ ಎಂದು ಈ ವಿನಾಯಿತಿ ಹೇಳುತ್ತದೆ.
ಆರೋಪಿಯ ರಿಟ್ ಅರ್ಜಿಯನ್ನು ಉಚ್ಚ ನ್ಯಾಯಾಲಯವು ವಜಾಗೊಳಿಸಿದ್ದು ಸರಿಯಾದ ಕ್ರಮವಾಗಿದೆ ಎಂದು ರಾಜ್ಯ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ.