ಉ.ಪ್ರ.: ನಕಲಿ ಎನ್ಕೌಂಟರ್ ಪ್ರಕರಣದಲ್ಲಿ 9 ಪೊಲೀಸರು ದೋಷಿಗಳು; ಸಿಬಿಐ ನ್ಯಾಯಾಲಯ
ಲಕ್ನೋ, ಡಿ. 22: 2006ರಲ್ಲಿ ನಡೆದ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ 9 ಪೊಲೀಸ್ ಅಧಿಕಾರಿಗಳನ್ನು ಗಾಝಿಯಾಬಾದ್(Ghaziabad)ನಲ್ಲಿರುವ ಸಿಬಿಐ ನ್ಯಾಯಾಲಯ ದೋಷಿಗಳು ಎಂದು ಪರಿಗಣಿಸಿದೆ. ಉತ್ತರಪ್ರದೇಶದ ಎಟಾ ಜಿಲ್ಲೆಯಲ್ಲಿ ರಾಜಾರಾಮ್(Rajaram) ಹೆಸರಿನ ಬಡಗಿಯನ್ನು ಹತ್ಯೆಗೈದಿರುವುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಆರೋಪಿಗಳಲ್ಲಿ ಓರ್ವನ ಅಡುಗೆ ಮನೆಯ ಕೆಲಸದ ಕೂಲಿ ಕೇಳಿರುವುದಕ್ಕೆ ಆತನನ್ನು ಹತ್ಯೆಗೈಯಲಾಯಿತು ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ. ಈಗ ದೋಷಿಗಳೆಂದು ಪರಿಗಣಿತವಾಗಿರುವ ಪೊಲೀಸ್ ಸಿಬ್ಬಂದಿ ರಾಜಾರಾಮ್ ಅವರ ವಿರುದ್ಧ ದರೋಡೆಕೋರ ಎಂದು ಸುಳ್ಳು ಆರೋಪ ಹೊರಿಸಿದ್ದರು ಹಾಗೂ 2006 ಆಗಸ್ಟ್ 18ರಂದು ನಕಲಿ ಎನ್ಕೌಂಟರ್ನಲ್ಲಿ ಹತ್ಯೆಗೈದಿದ್ದರು.
ಆಗ ಎಟಾದ ಸಿದ್ಧಾಪುರ ಪೊಲೀಸ್ ಠಾಣೆಯಲಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದರು. ಇವರಲ್ಲಿ ಓರ್ವನಾದ ಪವನ್ ಸಿಂಗ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಯಾಗಿದ್ದ. ವಿಶೇಷ ಸಿಬಿಐ ನ್ಯಾಯಾಧೀಶ ಪರ್ವೇಂದ್ರ ಕುಮಾರ್ ಶರ್ಮಾ ಅವರು 9 ಪೊಲೀಸ್ ಸಿಬ್ಬಂದಿಯನ್ನು ಮಂಗಳವಾರ ದೋಷಿಗಳು ಎಂದು ಪರಿಗಣಿಸಿದರು. ಅವರು ಶಿಕ್ಷೆಯ ಪ್ರಮಾಣವನ್ನು ಬುಧವಾರ ಘೋಷಿಸಲಿದ್ದಾರೆ.