ರಾಹುಲ್ ಗಾಂಧಿ ಪಾದಯಾತ್ರೆ ನಿಲ್ಲಿಸಲು ಕೇಂದ್ರದಿಂದ ವೈರಸ್ ಬಿಡುಗಡೆ: ಉದ್ಧವ್ ಠಾಕ್ರೆ ಬಣ

Update: 2022-12-22 16:20 GMT

ಮುಂಬೈ, ಡಿ. 22: ಕೋವಿಡ್(Covid) ಶಿಷ್ಟಾಚಾರ ಅನುಸರಿಸದೇ ಇದ್ದರೆ ‘ಭಾರತ್ ಜೋಡೊ ಯಾತ್ರೆ’(Bharat Jodo Yatra)ಯನ್ನು ಮುಂದೂಡಿ ಅಥವಾ ರದ್ದುಗೊಳಿಸಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಹಾಗೂ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot)ಅವರನ್ನು ಆಗ್ರಹಿಸಿ ಪತ್ರ ಬರೆದಿರುವ ಕುರಿತಂತೆ ಉದ್ಧವ್ ಠಾಕ್ರೆ(Uddhav Thackeray) ನೇತೃತ್ವದ ಶಿವಸೇನೆ ಬಣ ಗುರುವಾರ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

‘‘ಭಾರತ್ ಜೋಡೊ ಯಾತ್ರೆಯಲ್ಲಿ ಕೋವಿಡ್ ಶಿಷ್ಟಾಚಾರ ಅನುಸರಿಸಿ, ಇಲ್ಲವೇ ಪಾದಯಾತ್ರೆ ನಿಲ್ಲಿಸಿ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Mansukh Mandavia)ಅವರು ಸಲಹೆ ನೀಡಿದ್ದಾರೆ. ರಾಹುಲ್ ಗಾಂಧಿ ಅವರು ಭಾರತ್ ಜೋಡೊ ಯಾತ್ರೆಯ 100 ದಿನ ಪೂರ್ಣಗೊಳಿಸಿದ್ದಾರೆ ಹಾಗೂ ದೊಡ್ಡ ಮಟ್ಟದಲ್ಲಿ ಸಾಮೂಹಿಕ ಬೆಂಬಲ ಪಡೆದುಕೊಂಡಿದ್ದಾರೆ.

ಕೇಂದ್ರ ಸರಕಾರಕ್ಕೆ ಪಾದಯಾತ್ರೆಯನ್ನು ಕಾನೂನಿನ ಮೂಲಕ ಅಥವಾ ಪಿತೂರಿಯ ಮೂಲಕ ನಿಲ್ಲಿಸಲು ಸಾಧ್ಯವಾಗಲಿಲ್ಲ. ಆದುದರಿಂದ ಅದು ಕೋವಿಡ್ ವೈರಸ್ ಅನ್ನು ಬಿಡುಗಡೆ ಮಾಡಿದಂತೆ ಕಾಣುತ್ತದೆ’’ ಎಂದು ಠಾಕ್ರೆ ಬಣದ ರಾಜಕೀಯ ಮುಖವಾಣಿ ‘ಸಾಮ್ನಾದ’ ಸಂಪಾದಕೀಯ ಹೇಳಿದೆ.

‘‘ಭಾರತ್ ಜೋಡೊ ಯಾತ್ರೆಯಲ್ಲಿ ಜನರು ಹೆಚ್ಚು ಹೆಚ್ಚು ಪಾಲ್ಗೊಳ್ಳುವುದರಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಭೀತಿ ಪಡುವುದು ಸರಿಯಾಗಿಯೇ ಇದೆ. ಆದರೆ, ಮೂರು ವರ್ಷಗಳ ಹಿಂದೆ ಕೊರೋನ ಹರಡುತ್ತಿರುವ ನಡುವೆ ಅಮೆರಿಕದ ಪ್ರಧಾನಿ ಟ್ರಂಪ್ ಅವರನ್ನು ಗುಜರಾತ್ಗೆ ಆಹ್ವಾನಿಸಿರುವುದು ಹಾಗೂ ಅವರಿಗೆ ಗೌರವ ಸಲ್ಲಿಸಲು ಲಕ್ಷಾಂತರ ಜನರನ್ನು ಸಂಘಟಿಸಿರುವುದು ನೀವು’’ ಎಂದು ‘ಸಾಮ್ನಾ’ ಹೇಳಿದೆ.

ಕೇಂದ್ರದ ಆರೋಗ್ಯ ಸಚಿವ ಮನುಸುಖ್ ಮಾಂಡವಿಯಾ ಅವರು ಮಂಗಳವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಪತ್ರ ಬರೆದು ಕಾಂಗ್ರೆಸ್ನ ‘ಭಾರತ್ ಜೋಡೊ ಯಾತ್ರೆ’ಯ ಸಂದರ್ಭ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಎಂದು ಸೂಚಿಸಿದ್ದರು. 

Similar News