ಸುಳ್ಳು ಮಾಹಿತಿ ಹರಡಿದ್ದಕ್ಕಾಗಿ 104 ಯೂಟ್ಯೂಬ್ ಚಾನೆಲ್‌ಗಳಿಗೆ ನಿರ್ಬಂಧ: ಕೇಂದ್ರ ಸರಕಾರ

Update: 2022-12-22 16:28 GMT

ಹೊಸದಿಲ್ಲಿ,ಡಿ.22: ವದಂತಿಗಳು ಮತ್ತು ಭೀತಿಯನ್ನು ಸೃಷ್ಟಿಸಲು ಕಾರಣವಾಗಬಹುದಾದ ‘ಸುಳ್ಳು’ (lie)ಮತ್ತು ‘ದಾರಿ ತಪ್ಪಿಸುವ’(Misleading) ಮಾಹಿತಿಗಳನ್ನು ಹರಡುತ್ತಿದ್ದಕ್ಕಾಗಿ ಸರಕಾರವು 104 ಯೂಟ್ಯೂಬ್ ಚಾನೆಲ್‌(YouTube channel)ಗಳನ್ನು ಮತ್ತು 45 ಯೂಟ್ಯೂಬ್ ವೀಡಿಯೊಗಳನ್ನು ನಿರ್ಬಂಧಿಸಿದೆ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ ಠಾಕೂರ್(Anurag Thakur) ಅವರು ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದರು.

ಯೂಟ್ಯೂಬ್ ಈ ವಾರದ ಆರಂಭದಲ್ಲಿ ಸಚಿವಾಲಯದ ನಿರ್ದೇಶನದ ಮೇರೆಗೆ ಸರ್ವೋಚ್ಚ ನ್ಯಾಯಾಲಯ,ಭಾರತದ ಮುಖ್ಯ ನ್ಯಾಯಾಧೀಶರು,ಪ್ರಧಾನಿ ನರೇಂದ್ರ ಮೋದಿ ಮತ್ತು ಚುನಾವಣಾ ಆಯೋಗದ ಕುರಿತು ತಪ್ಪು ಮಾಹಿತಿಗಳನ್ನು ಹರಡಿದ್ದ ಆರೋಪದಲ್ಲಿ 30 ಕೋಟಿಗೂ ಅಧಿಕ ವೀಕ್ಷಕರನ್ನು ಮತ್ತು 33 ಲಕ್ಷ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದ ಮೂರು ಚಾನೆಲ್‌ಗಳನ್ನು ನಿರ್ಬಂಧಿಸಿತ್ತು.

ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಪ್ರಸಾರಗೊಳ್ಳುವ ಸುಳ್ಳು ಸುದ್ದಿಗಳ ಹರಡುವಿಕೆ ಕುರಿತು ಬಿಜೆಪಿಯ ರಾಜ್ಯಸಭಾ ಸದಸ್ಯ ಜುಗಲಸಿಂಹ ಲೋಖಂಡವಾಲಾ ಅವರ ಪ್ರಶ್ನೆಗೆ ಠಾಕೂರ್ ಉತ್ತರಿಸುತ್ತಿದ್ದರು.

ದಾರಿ ತಪ್ಪಿಸಲು ಹಾಗೂ ಸಮಾಜದಲ್ಲಿ ಭೀತಿ ಮತ್ತು ಒಡಕನ್ನು ಸೃಷ್ಟಿಸಲು ಪ್ರಯತ್ನಿಸಿದ್ದ ಚಾನೆಲ್‌ಗಳ ವಿರುದ್ಧ ಐಟಿ ಕಾಯ್ದೆಯ 69ಎ ಕಲಮ್‌ನಡಿ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ ಠಾಕೂರ್,‘104 ಯೂಟ್ಯೂಬ್ ಚಾನೆಲ್‌ಗಳು,45 ವೀಡಿಯೊಗಳು,ನಾಲ್ಕು ಫೇಸ್‌ಬುಕ್ ಖಾತೆಗಳು ಮತ್ತು ಎರಡು ಪೋಸ್ಟ್‌ಗಳು,ಮೂರು ಇನ್‌ಸ್ಟಾಗ್ರಾಂ ಖಾತೆಗಳು,ಐದು ಟ್ವಿಟರ್ ಖಾತೆಗಳು ಮತ್ತು ಮೂರು ಪಾಡ್‌ಕಾಸ್ಟ್‌ಗಳನ್ನು ನಾವು ನಿಷೇಧಿಸಿದ್ದೇವೆ ’ಎಂದು ತಿಳಿಸಿದರು. ಎರಡು ಆ್ಯಪ್‌ಗಳು ಮತ್ತು ಆರು ವೆಬ್‌ಸೈಟ್‌ಗಳ ವಿರುದ್ಧವೂ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ದೇಶದ ಭದ್ರತೆಯನ್ನು ಕಾಪಾಡಲು ಇಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸಚಿವಾಲಯವು ಹಿಂಜರಿಯುವುದಿಲ್ಲ ಎಂದೂ ಅವರು ಹೇಳಿದರು.

ಮಕ್ಕಳನ್ನು ಗುರಿಯಾಗಿಸಿಕೊಂಡು ಲೈಂಗಿಕ ಸ್ವರೂಪದ ತಪ್ಪುದಾರಿಗೆಳೆಯುವ ಜಾಹೀರಾತುಗಳ ಕುರಿತು ಬಿಜೆಪಿಯ ರಾಜ್ಯಸಭಾ ಸದಸ್ಯ ರಾಕೇಶ ಸಿನ್ಹಾ ಅವರ ಪ್ರಶ್ನೆಗೆ ಉತ್ತರಿಸಿದ ಠಾಕೂರ್,ನಿಯಮಗಳನ್ನು ಉಲ್ಲಂಘಿಸುವ ಇಂತಹ ಜಾಹೀರಾತುಗಳನ್ನು ತಕ್ಷಣವೇ ಗುರುತಿಸಲಾಗುತ್ತದೆ ಮತ್ತು ಅವುಗಳ ಸೃಷ್ಟಿಕರ್ತರಿಗೆ ನೋಟಿಸ್ ಕಳುಹಿಸಲಾಗುತ್ತದೆ ಎಂದು ತಿಳಿಸಿದರು. 

Similar News