×
Ad

ದೇಶದ ಪ್ರಥಮ ಮುಸ್ಲಿಂ ಮಹಿಳಾ ಯುದ್ಧ ವಿಮಾನ ಪೈಲಟ್‌ ಆಗಲು ಸಜ್ಜಾದ ಉತ್ತರ ಪ್ರದೇಶದ ಸಾನಿಯಾ ಮಿರ್ಝಾ

Update: 2022-12-23 10:35 IST

ಮಿರ್ಜಾಪುರ್: ‌ ಉತ್ತರ ಪ್ರದೇಶದ  ಮಿರ್ಜಾಪುರ್‌ ಇಲ್ಲಿನ ಟಿವಿ ಮೆಕ್ಯಾನಿಕ್‌ ಒಬ್ಬರ ಪುತ್ರಿ ಸಾನಿಯಾ ಮಿರ್ಝಾ (Sania Mirza) ಭಾರತೀಯ ವಾಯುಸೇನೆಯಲ್ಲಿ ಯುದ್ಧ ವಿಮಾನದ ಪೈಲಟ್‌ (Fighter Pilot) ಆಗಿ ಆಯ್ಕೆಯಾಗಿದ್ದು, ಈ ಮೂಲಕ ವಾಯುಸೇನೆಯ ಪೈಲಟ್‌ ಆಗುತ್ತಿರುವ ದೇಶದ ಪ್ರಥಮ ಮುಸ್ಲಿಂ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಮಿರ್ಜಾಪುರದ ಜಸೋವರ್‌ ಗ್ರಾಮದ ನಿವಾಸಿಯಾಗಿರುವ ಸಾನಿಯಾ ಎನ್‌ಡಿಎ (NDA) ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಯುದ್ಧ ವಿಮಾನದ ಪೈಲಟ್‌ ಆಗುವ ಅರ್ಹತೆ ಪಡೆದಿದ್ದಾರೆ. ಹಿಂದಿ ಮಾಧ್ಯಮದಲ್ಲಿ ಶಿಕ್ಷಣ ಪಡೆದಿರುವ ಸಾನಿಯಾ ಡಿಸೆಂಬರ್‌ 27 ರಂದು ಪುಣೆಯ ಎನ್‌ಡಿಎ ಖಡಕ್‌ವಾಸ್ಲಾ ಇಲ್ಲಿ ಸೇರಲಿದ್ದಾರೆ.

ಪ್ರಾಥಮಿಕ ಮತ್ತು ಹೈಸ್ಕೂಲ್‌ ಶಿಕ್ಷಣವನ್ನು  ಗ್ರಾಮದ ಪಂಡಿತ್‌ ಚಿಂತಾಮಣಿ ದುಬೆ ಇಂಟರ್‌ ಕಾಲೇಜಿನಲ್ಲಿ ಪಡೆದ ಅವರು ನಂತರ ಗುರು ನಾನಕ್‌ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಿದ್ದರು ಹಾಗೂ 12ನೇ ತರಗತಿಯಲ್ಲಿ ಜಿಲ್ಲಾ ಟಾಪರ್‌ ಆಗಿದ್ದರು. ಸೆಂಚೂರಿಯನ್‌ ಡಿಫೆನ್ಸ್‌ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ ಅವರು ತಮ್ಮ ಯಶಸ್ಸಿನ ಶ್ರೇಯವನ್ನು ತಮ್ಮ ಹೆತ್ತವರು ಮತ್ತು ಈ ಅಕಾಡೆಮಿಗೆ ಸಲ್ಲಿಸುತ್ತಾರೆ.

ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ 2022 ಪರೀಕ್ಷೆಯಲ್ಲಿ ಯುದ್ಧ ವಿಮಾನ ಪೈಲಟ್‌ ಹುದ್ದೆಗೆ ಮಹಿಳೆಯರಿಗೆ ಕೇವಲ ಎರಡು  ಸೀಟು ಲಭ್ಯಗೊಳಿಸಲಾಗಿತ್ತು. ಮೊದಲ ಯತ್ನದಲ್ಲಿ ಸಾನಿಯಾಗೆ ಯಶಸ್ಸು ದೊರೆಯದೇ ಇದ್ದರೂ ಎರಡನೇ ಯತ್ನದಲ್ಲಿ ಅವರು ಸಫಲರಾಗಿದ್ದಾರೆ.

ಸಾನಿಯಾ ತಂದೆ ಶಾಹಿದ್‌ ಆಲಿ ಮಾತನಾಡಿ, ದೇಶದ ಪ್ರಥಮ ಮಹಿಳಾ ಫೈಟರ್‌ ಪೈಲಟ್‌ ಅವ್ನಿ ಚತುರ್ವೇದಿ ತಮ್ಮ ಮಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದರು.

ನಮ್ಮ ಮಗಳು ನಮ್ಮ ಕುಟುಂಬಕ್ಕೆ ಮತ್ತು ಇಡೀ ಗ್ರಾಮಕ್ಕೆ ಹೆಮ್ಮೆ ತಂದಿದ್ದಾಳೆ ಎಂದು ಸಾನಿಯಾ ತಾಯಿ ತಬಸ್ಸುಂ ಮಿರ್ಝಾ ಹೇಳಿದ್ದಾರೆ.

ನ್ಯಾಷನ್‌ ಡಿಫೆನ್ಸ್‌ ಅಕಾಡೆಮಿ 2022 ಪರೀಕ್ಷೆಯನ್ನು ಒಟ್ಟು 400 ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗಿತ್ತು. ಇವುಗಳಲ್ಲಿ 19 ಸ್ಥಾನಗಳು ಮಹಿಳೆಯರಿಗೆ ಹಾಗೂ 2 ಸ್ಥಾನಗಳು ಮಹಿಳಾ ಫೈಟರ್‌ ಪೈಲಟ್‌ಗಳಿಗೆ ಮೀಸಲಾಗಿತ್ತು. ಈ ಎರಡು ಸೀಟುಗಳಲ್ಲಿ ಒಂದು ಸಾನಿಯಾಗೆ ದೊರಕಿದೆ.

ಇದನ್ನೂ ಓದಿ: ಬಹುರಾಷ್ಟ್ರೀಯ ಕಂಪನಿಗಳು ಭಾರತದಿಂದ ಕಾಲ್ಕೀಳುತ್ತಿರುವುದೇಕೆ?: ಇಲ್ಲಿದೆ ಮಾಹಿತಿ

Similar News