ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುತ್ತೇವೆ, ಆದರೆ ಭಾರತ್ ಜೋಡೊ ಯಾತ್ರೆ ಸ್ಥಗಿತಗೊಳಿಸುವುದಿಲ್ಲ: ಕಾಂಗ್ರೆಸ್

Update: 2022-12-23 08:41 GMT

ಲಕ್ನೊ: ಕೋವಿಡ್ ಸಂಬಂಧಿತ ಮಾರ್ಗಸೂಚಿಗಳನ್ನು ಪಾಲಿಸಲಾಗುವುದು. ಆದರೆ, ಭಾರತ್ ಜೋಡೊ ಯಾತ್ರೆಯನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಸ್ಪಷ್ಟಪಡಿಸಿದ್ದಾರೆ.

ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸಲು ಸಾಧ್ಯವಿಲ್ಲದಿದ್ದರೆ ಯಾತ್ರೆಯನ್ನು ಅಮಾನತುಗೊಳಿಸುವುದನ್ನು ಪರಿಗಣಿಸಿ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮಂಗಳವಾರ ರಾಹುಲ್ ಗಾಂಧಿ ಮತ್ತು ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಪತ್ರ ಬರೆದ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.

ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶದಲ್ಲಿನ ಭಾರತ್ ಜೋಡೊ ಯಾತ್ರೆ ಸಮಿತಿಯ ಸಂಯೋಜಕರಾಗಿರುವ ಸಲ್ಮಾನ್ ಖುರ್ಷಿದ್, "ಕಾಂಗ್ರೆಸ್ ಕೋವಿಡ್ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಆದರೆ ಭಾರತ್ ಜೋಡೊ ಯಾತ್ರೆ ನಿಲ್ಲುವುದಿಲ್ಲ, ನಿಲ್ಲುವುದಿಲ್ಲ, ನಿಲ್ಲುವುದಿಲ್ಲ" ಎಂದು ಪುನರುಚ್ಚರಿಸಿದ್ದಾರೆ ಎಂದು thenewsminute.com ವರದಿ ಮಾಡಿದೆ. ಅವರು ಸಚಿವರ ಪತ್ರದಿಂದ ಯಾತ್ರೆ ಮೇಲೆ ಪರಿಣಾಮವಾಗಲಿದೆಯೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಿದ್ದರು.

"ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪ್ರತಿಪಕ್ಷ ಹಾಗೂ ವ್ಯಕ್ತಿಗೂ ತನಗೆ ಅನಿಸಿದ್ದನ್ನು ಹೇಳುವ ಹಕ್ಕಿದೆ. ಆದರೆ, ಸರ್ಕಾರವು ಭಾರತ್ ಜೋಡೊ ಯಾತ್ರೆಗೆ ಹೆದರಿದೆ. ಹೀಗಾಗಿಯೇ ಹಲವಾರು ಆದೇಶ ಮತ್ತು ಪತ್ರಗಳನ್ನು ಹೊರಡಿಸುತ್ತಿದೆ. ಯಾರೂ ಕೋವಿಡ್ ಬಗ್ಗೆ ಆತಂಕಗೊಳ್ಳಲಿಲ್ಲವೊ, ಅವರೀಗ ಯಾತ್ರೆಯಿಂದ ಆತಂಕಗೊಂಡಿದ್ದಾರೆ. ನಾವು ಯಾವುದೇ ಪತ್ರವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ" ಎಂದು ಹೇಳಿದ್ದಾರೆ.

"ಯಾತ್ರೆಗೆ ಸಂಬಂಧಪಟ್ಟ ಆಡಳಿತ ಯಂತ್ರದಿಂದ ಅಗತ್ಯವಿರುವ ಅನುಮತಿಯನ್ನು ಪಡೆಯಲಾಗಿದೆ. ಬಿಜೆಪಿ ಸರ್ಕಾರವೇನಾದರೂ ಆಡಳಿತ ಯಂತ್ರದ ಮೂಲಕ ಯಾತ್ರೆಯನ್ನು ತಡೆಯಲು ಮುಂದಾದರೆ ಅದು ಪ್ರಜಾಸತ್ತಾತ್ವಕ ಸಂಸ್ಥೆಗಳಿಗೆ ಉತ್ತರಿಸಬೇಕಾಗುತ್ತದೆ" ಎಂದು ಎಚ್ಚರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸದನಕ್ಕೆ ಮುಖಗವಸು ತೊಟ್ಟು ಬಂದಿದ್ದರು ಎಂಬ ಸುದ್ದಿಗಾರರ ಮಾತಿಗೆ, "ಮೋದಿ ಓರ್ವ ಅತ್ಯುತ್ತಮ ನಾಟಕ ಕಲಾವಿದ" ಎಂದು ವ್ಯಂಗ್ಯವಾಡಿದ್ದಾರೆ.

Similar News