ಪಾರ್ಲಿಮೆಂಟ್‌ನಲ್ಲಿ ಮಾತ್ರ ಮಾಸ್ಕ್‌, ಮದುವೆ ಸಮಾರಂಭಗಳಿಗೆ ಮಾಸ್ಕ್‌ ಬೇಕಿಲ್ಲ: ಪ್ರಧಾನಿ ಮೋದಿ ವಿರುದ್ಧ ವ್ಯಾಪಕ ಟೀಕೆ

Update: 2022-12-23 09:16 GMT

ಹೊಸದಿಲ್ಲಿ: ಓಮಿಕ್ರಾನ್‌ನ ಹೊಸ ಉಪ-ವೇರಿಯಂಟ್ 'ಬಿಎಫ್.7' ಭಯದ ನಡುವೆ, ದೇಶವು ಕೋವಿಡ್ ತಡೆಗಟ್ಟುವ ಕ್ರಮಗಳತ್ತ ಸಾಗುತ್ತಿದೆ. ಮಾಸ್ಕ್ ಸೇರಿದಂತೆ ರಕ್ಷಣಾ ಕ್ರಮಗಳನ್ನು ಬಿಗಿಗೊಳಿಸುವಂತೆ ಕೇಂದ್ರವು ರಾಜ್ಯಗಳಿಗೆ ಸೂಚನೆ ನೀಡಿದೆ. ಈ ನಡುವೆ, ನಿನ್ನೆ ಸಂಸತ್ತಿನಲ್ಲಿ ಮಾಸ್ಕ್ ಧರಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲರೂ ಇದನ್ನು ಅನುಸರಿಸುವಂತೆ ಕೇಳಿಕೊಂಡಿದ್ದರು.

ಇದರ ಬೆನ್ನಲ್ಲೇ ಬಿಜೆಪಿ ನಾಯಕರು ರಾಹುಲ್ ಗಾಂಧಿ ನೇತೃತ್ವದ 'ಭಾರತ್ ಜೋಡೋ ಯಾತ್ರೆ'ಯನ್ನು ಸಾರ್ವಜನಿಕವಾಗಿ ಟಾರ್ಗೆಟ್ ಮಾಡಿದ್ದರು. ಯಾತ್ರೆಯ ಸಮಯದಲ್ಲಿ ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸುತ್ತಿಲ್ಲ ಎಂಬ ದೂರು ಕೇಳಿ ಬಂದಿತ್ತು. ಸಂಸತ್ತಿನಲ್ಲಿ ಪ್ರಧಾನಿ ಮುಖವಾಡ ಧರಿಸಿರುವ ಚಿತ್ರ ಹಾಗೂ ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿಯ ಚಿತ್ರವನ್ನು ಶೇರ್ ಮಾಡುವ ಮೂಲಕ ಬಿಜೆಪಿ ದಾಳಿ ನಡೆಸಿತ್ತು.

ಈ ನಡುವೆ ಪ್ರಧಾನಿ ಮೋದಿಯವರ ದ್ವಂದ್ವ ನೀತಿಯನ್ನು ಪ್ರಶ್ನಿಸಿದ ಚಿತ್ರಗಳು ಸಾಮಾಜಿಕ ಜಾಲತಾಣಗಳು ಹರಿದಾಡುತ್ತಿವೆ. ನಿನ್ನೆ ದಿಲ್ಲಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಮಾಸ್ಕ್ ಮತ್ತು ಕೋವಿಡ್ ಪ್ರೋಟೋಕಾಲ್ ಇಲ್ಲದೆ ಮೋದಿ ಭಾಗವಹಿಸಿದ್ದರು ಎಂಬ ಅಂಶವನ್ನು ಆಧರಿಸಿ ಟೀಕೆ ವ್ಯಕ್ತವಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಅವರ ಸೋದರಳಿಯ ವಿವಾಹ ಆರತಕ್ಷತೆಯಲ್ಲಿ ಕೇಂದ್ರ ಸಚಿವರು ಮತ್ತು ಪ್ರಮುಖ ಬಿಜೆಪಿ ನಾಯಕರೊಂದಿಗೆ ಪ್ರಧಾನಿ ಭಾಗವಹಿಸಿದ್ದರು. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲು ಕಾಂಗ್ರೆಸ್ ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿದೆ.

ಕೈಲಾಶ್ ಅವರ ಸಹೋದರ ವಿಜಯ್ ಅವರ ಪುತ್ರ ಮನು ವಿಜಯವರ್ಗಿಯಾ ಅವರ ವಿವಾಹ ಆರತಕ್ಷತೆ ಕೇಂದ್ರ ಸಚಿವ ನರೇಂದ್ರ ತೋಮರ್ ಅವರ ನಿವಾಸದಲ್ಲಿ ನಡೆಯಿತು. ಅಪಾರ ಜನಸ್ತೋಮದೊಂದಿಗೆ ಮೋದಿ ನೇರವಾಗಿ ವೇದಿಕೆಗೆ ತೆರಳಿ ನವದಂಪತಿಗಳೊಂದಿಗೆ ಫೋಟೋ ತೆಗೆಸಿ ಶುಭ ಹಾರೈಸಿದರು. ಆದಾಗ್ಯೂ, ಸಮಾರಂಭದುದ್ದಕ್ಕೂ ಮಾಸ್ಕ್ ಮತ್ತು ಸಾಮಾಜಿಕ ಅಂತರ ಸೇರಿದಂತೆ ಯಾವುದೇ ಕೋವಿಡ್ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಕಾಂಗ್ರೆಸ್ ಬೆಂಬಲಿಗರು ಗಮನಸೆಳೆದಿದ್ದಾರೆ.

Similar News