ಮೊಬೈಲ್ ಕಳವಿನಲ್ಲಿ ತೊಡಗಿದ್ದ 'ಮೆಸ್ಸಿ ಗ್ಯಾಂಗ್' ಭೇದಿಸುವಲ್ಲಿ ಪೊಲೀಸರು ಯಶಸ್ವಿ; ನಾಲ್ವರ ಬಂಧನ

Update: 2022-12-23 10:10 GMT

ಹೊಸದಿಲ್ಲಿ: ದಕ್ಷಿಣ ದಿಲ್ಲಿಯಲ್ಲಿ ಮೊಬೈಲ್ ಕಳ್ಳತನದಲ್ಲಿ ತೊಡಗಿದ್ದ 'ಮೆಸ್ಸಿ ಗ್ಯಾಂಗ್' ಅನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ದಿಲ್ಲಿ ಪೊಲೀಸರು, ಅರ್ಜೆಂಟೀನಾ ತಂಡದ ನಾಯಕ ಲಿಯೊನೆಲ್ ಮೆಸ್ಸಿ ಅಭಿಮಾನಿ ಎಂದು ಹೇಳಿಕೊಂಡಿರುವ 43 ವರ್ಷದ ವ್ಯಕ್ತಿ ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತ ತಂಡವು ಒಟ್ಟು 55 ಮೊಬೈಲ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರ ಪ್ರಕಾರ, ಜನಜಂಗುಳಿ ಪ್ರದೇಶಗಳಲ್ಲಿ ಜನರಿಂದ ಕಳವು ಮಾಡುವುದು ಮತ್ತು ಲಪಟಾಯಿಸುವುದು ಈ ತಂಡದ ಕಾರ್ಯತಂತ್ರವಾಗಿತ್ತು. ಕಳೆದ ಎರಡು ವರ್ಷಗಳಲ್ಲಿ ಈ ತಂಡ ಹಲವಾರು ಜನರನ್ನು ಗುರಿಯಾಗಿಸಿಕೊಂಡು ಕಳವು ಮಾಡಿದೆ. ಈ ತಂಡದ ನಾಯಕ ಫುಟ್‌ಬಾಲ್ ಅಭಿಮಾನಿಯಾಗಿದ್ದು, ಸ್ವತಃ ಫುಟ್‌ಬಾಲ್ ಪಟುವೂ ಆಗಿದ್ದಾನೆ‌. ಆತ ಯಾವಾಗಲೂ ತನ್ನನ್ನು ತಾನು ಮೆಸ್ಸಿ ಎಂದೇ ಕರೆದುಕೊಳ್ಳುತ್ತಾನೆ" ಎಂದು ತಿಳಿಸಿದ್ದಾರೆ.

ತಂಡದ ನಾಯಕ ಪಿಂಕು ಜೊತೆಗೆ ಆತನ ಸಹಚರರಾದ ಅಜಯ್ ಕುಮಾರ್ (37), ಪಮ್ಮಿ (52) ಹಾಗೂ ಫಿರೋಝ್ ಖಾನ್ (30) ಎಂಬವರನ್ನು ಬಂಧಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಉಪ ಆಯುಕ್ತ (ದಕ್ಷಿಣ) ಚಂದನ್ ಚೌಧರಿ, "ಮಂಗಳವಾರ ಗಸ್ತು ತಿರುಗುತ್ತಿದ್ದಾಗ ಆರೋಪಿಗಳನ್ನು ತಡೆದು, ಪ್ರಶ್ನಿಸಲಾಯಿತು. ಆಗ ಅವರು ಪೊಲೀಸ್ ಸಿಬ್ಬಂದಿಯ ದಾರಿ ತಪ್ಪಿಸಲು ಪ್ರಯತ್ನಿಸಿದರು. ಆದರೆ, ಅವರನ್ನು ತೀವ್ರ ತಪಾಸಣೆಗೆ ಒಳಪಡಿಸಿದಾಗ ಅವರ ಬಳಿ 11 ಮೊಬೈಲ್ ಫೋನ್‌ಗಳು ಪತ್ತೆಯಾದವು. ಅವರು ಅಷ್ಟು ಮೊಬೈಲ್ ಫೋನ್‌ಗಳು ತಮ್ಮ ಬಳಿ ಏಕಿವೆ ಎಂದು ವಿವರಿಸಲು ವಿಫಲವಾಗಿದ್ದರಿಂದ ಪೊಲೀಸರಿಗೆ ಸಿಕ್ಕಿ ಬಿದ್ದರು. ಅವರನ್ನು ವಿಚಾರಣೆಗೊಳಪಡಿಸಿದಾಗ, ಅವರು ನೀಡಿದ ಸುಳಿವನ್ನು ಆಧರಿಸಿ ವಿವಿಧ ಸ್ಥಳಗಳಿಂದ ಅಪಹರಿಸಲಾಗಿದ್ದ 45 ಮೊಬೈಲ್ ಫೋನ್‌ಗಳನ್ನು ಮತ್ತೆ ವಶಪಡಿಸಿಕೊಳ್ಳಲಾಯಿತು" ಎಂದು ತಿಳಿಸಿದ್ದಾರೆ.

ವಿಚಾರಣೆಯ ಸಂದರ್ಭದಲ್ಲಿ ಕಳೆದ 4-5 ವರ್ಷಗಳಿಂದ ನಮ್ಮ ತಂಡವು ದಕ್ಷಿಣ ದಿಲ್ಲಿ ಹಾಗೂ ಆಗ್ನೇಯ ದಿಲ್ಲಿಯಲ್ಲಿ ಕಾರ್ಯಾಚರಿಸುತ್ತಿತ್ತು ಎಂದು ಪಿಂಕು ಬಾಯ್ಬಿಟ್ಟಿದ್ದಾನೆ ಎಂದು ಅವರು ಹೇಳಿದ್ದಾರೆ.

Similar News