ಪಿಎಫ್‌ಐ ಪ್ರತಿಭಟನೆ: ನಷ್ಟ ಪರಿಹಾರ ವಸೂಲಿಯಲ್ಲಿ ವಿಳಂಬಕ್ಕೆ ಹೈಕೋರ್ಟ್‌ನಿಂದ ಕ್ಷಮೆಯಾಚಿಸಿದ ಕೇರಳ ಸರ್ಕಾರ

Update: 2022-12-23 11:43 GMT

ತಿರುವನಂತಪುರಂ: ಸೆಪ್ಟೆಂಬ್‌ ತಿಂಗಳಿನಲ್ಲಿ ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಪ್‌ ಇಂಡಿಯಾ (PFI) ಸದಸ್ಯರಿಂದ ನಡೆದ ಪ್ರತಿಭಟನೆ ವೇಳೆ ಉಂಟಾದ ಆಸ್ತಿಪಾಸ್ತಿ ನಷ್ಟವನ್ನು ವಸೂಲಿ ಮಾಡುವ ಪ್ರಕ್ರಿಯೆಯನ್ನು ಆರಂಭಿಸಲು ವಿಫಲವಾಗಿರುವುದಕ್ಕೆ ಕೇರಳ ಸರ್ಕಾರ ಇಂದು ಹೈಕೋರ್ಟಿನಿಂದ ಕ್ಷಮೆಯಾಚಿಸಿದೆ ಎಂದು Bar and Bench ವರದಿ ಮಾಡಿದೆ.

ವಿಳಂಬಕ್ಕೆ ರಾಜ್ಯ ಸರ್ಕಾರವನ್ನು ನ್ಯಾಯಮೂರ್ತಿಗಳಾದ ಎ ಕೆ ಜಯಶಂಕರನ್‌ ನಂಬಿಯಾರ್‌ ಮತ್ತು ಮುಹಮ್ಮದ್‌ ನಿಯಾಸ್‌ ಸಿಪಿ ಅವರ ವಿಭಾಗೀಯ ಪೀಠ ತರಾಟೆಗೆ ತೆಗೆದುಕೊಂಡಿತು.

"ನಾವು ಗತಕಾಲಕ್ಕೆ ಅಂಟಿಕೊಂಡಿರಲು ಸಾಧ್ಯವಿಲ್ಲ, ಕಾರ್ಯಾಂಗ ಮತ್ತು ನ್ಯಾಯಾಂಗದ ಸಂಬಂಧ ಸುಧಾರಿಸಬೇಕು, ಸಾಂವಿಧಾನಿಕ ಅಗತ್ಯವೆಂದರೆ ನಾವು ಸಮಾಲೋಚನೆ ನಡೆಸಿ ನಂತರ ಸಹಭಾಗಿತ್ವದಿಂದ ಕೆಲಸ ಮಾಡಬೇಕು," ಎಂದು ಪೀಠ ಹೇಳಿದೆ.

ಹಿಂಸಾತ್ಮಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್‌ ಸೆಪ್ಟೆಂಬರ್‌ 23 ರಂದು ಪಿಎಫ್‌ಐ ಸದಸ್ಯರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿತ್ತು ಎಂದು scroll.in ವರದಿ ಮಾಡಿದೆ.

ಪಿಎಫ್‌ಐ ಪ್ರತಿಭಟನಾಕಾರರು ಕೊಲ್ಲಂ, ತ್ರಿಶೂರು, ಕಣ್ಣೂರು, ಕೊಝಿಕ್ಕೋಡ್‌, ವಯನಾಡ್‌, ತಿರುವನಂತಪುರಂ, ಅಲಪ್ಪುಝ, ಪಂಥಲಂನಲ್ಲಿ ಬಸ್ಸುಗಳ ಗಾಜುಗಳನ್ನು ಒಡೆದಿದ್ದರಿಂದ ರೂ 5.06 ಕೋಟಿ ನಷ್ಟಪರಿಹಾರ ಒದಗಿಸಬೇಕೆಂದು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ಬೇಡಿಕೆಯಿರಿಸಿತ್ತು.

ನಷ್ಟಪರಿಹಾರವಾಗಿ ರೂ 5.20 ಕೋಟಿ ಠೇವಣಿಯಿಡುವಂತೆ ಕೇರಳ ಹೈಕೋರ್ಟ್‌ ಸೆಪ್ಟೆಂಬರ್‌ 29 ರಂದು ಪಿಎಫ್‌ಐಗೆ ಸೂಚಿಸಿತ್ತು. ನಷ್ಟಪರಿಹಾರ ಮೊತ್ತ ವಸೂಲಿಯಲ್ಲಾದ ವಿಳಂಬ ಕುರಿತು ಕಳೆದ ವಿಚಾರಣೆಯಲ್ಲೂ ನ್ಯಾಯಾಲಯವು ಸರ್ಕಾರವನ್ನು ಟೀಕಿಸಿತ್ತಲ್ಲದೆ ಪ್ರಕ್ರಿಯೆಗೆ ವೇಗ ನೀಡುವಂತೆ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿತ್ತು.

Similar News