ಉ.ಪ್ರ: ಪ್ರಾರ್ಥನೆಯಾಗಿ ಇಕ್ಬಾಲರ ಕವನ ಹಾಡಿದ ವಿದ್ಯಾರ್ಥಿಗಳು; ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲು
ಲಕ್ನೋ, ಡಿ. 23: ಜನಪ್ರಿಯ ಉರ್ದು ಕವಿ ಮುಹಮ್ಮದ್ ಇಕ್ಬಾಲ್(Muhammad Iqbal) ಅವರ ಕವಿತೆಯನ್ನು ವಿದ್ಯಾರ್ಥಿಗಳು ಹಾಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಸರಕಾರಿ ಶಾಲೆಯ ಪ್ರಾಂಶುಪಾಲರ ವಿರುದ್ಧ ಗುರುವಾರ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ.
ಮುಹಮ್ಮದ್ ಇಕ್ಬಾಲ್ ಅವರು 1902ರಲ್ಲಿ ‘ಲಬ್ ಪೆ ಆತಿ ಹೈ ದುವಾ’(Lab pe ati hai dua) ಕವನ ರಚಿಸಿದ್ದರು. ಅವರು ‘ಸಾರೇ ಜಹಾನ್ ಸೆ ಅಚ್ಚಾ’(Sare jahan se acha) ಎಂಬ ಜನಪ್ರಿಯ ದೇಶ ಭಕ್ತಿ ಗೀತೆಯನ್ನು ಕೂಡ ಬರೆದಿದ್ದರು. ಸಾಮಾಜಿಕ ಜಾಲ ತಾಣದ ವೀಡಿಯೊದಲ್ಲಿ ವಿದ್ಯಾರ್ಥಿಗಳು ಬೆಳಗ್ಗಿನ ಪ್ರಾರ್ಥನೆಯ ಸಂದರ್ಭ ‘‘ಮೇರಾ ಅಲ್ಲಾ ಬುರೈ ಸೆ ಬಚಾನ ಮುಜ್ಕೊ’’ (ಓ ಅಲ್ಲಾ, ನನ್ನನ್ನು ಕೆಡುಕಿನಿಂದ ರಕ್ಷಿಸು) ಎಂದು ಹಾಡುತ್ತಿರುವ ಕಂಡು ಬಂದಿದೆ. ಸ್ಥಳೀಯ ಹಿಂದೂ ಪರಿಷತ್ ನಾಯಕ ಸಂಪಲ್ ಸಿಂಗ್ ರಾಥೋಡ್ ಸಲ್ಲಿಸಿದ ದೂರಿನ ಆಧಾರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದಲ್ಲಿ ಪ್ರಾಂಶುಪಾಲ ನಹೀದ್ ಸಿದ್ದೀಕಿ ಹಾಗೂ ಶಾಲೆಯ ಶಿಕ್ಷಾ ಮಿತ್ರ ವಝೀರುದ್ದೀನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ರಾಜ್ಯ ಶಿಕ್ಷಣ ಇಲಾಖೆ ಸಿದ್ದೀಕಿ ಅವರನ್ನು ಅಮಾನತುಗೊಳಿಸಿದೆ ಹಾಗೂ ವಝೀರುದ್ದೀನ್ ವಿರುದ್ಧ ತನಿಖೆಗೆ ಆದೇಶಿಸಿದೆ. ವಿದ್ಯಾರ್ಥಿಗಳನ್ನು ಮತಾಂತರಗೊಳಿಸುವ ಪ್ರಯತ್ನವಾಗಿ ಈ ಪ್ರಾರ್ಥನೆಯನ್ನು ಹಾಡಲಾಗುತ್ತಿದೆ ಎಂದು ವಿಶ್ವಹಿಂದೂ ಪರಿಷದ್ ಪದಾಧಿಕಾರಿ ಪ್ರತಿಪಾದಿಸಿದ್ದಾರೆ.