ಮಂಗಳೂರು: ಕ್ರಿಸ್ಮಸ್ ಆಚರಣೆಗೆ ಭರದ ಸಿದ್ಧತೆ
ಮಂಗಳೂರು: ಏಸು ಕ್ರಿಸ್ತರ ಜನ್ಮದಿನವಾದ ಕ್ರಿಸ್ಮಸ್ (ಡಿ.25) ಆಚರಣೆಗೆ ನಗರ ಸಹಿತ ದ.ಕ.ಜಿಲ್ಲಾದ್ಯಂತ ಕೆಲವು ದಿನಗಳ ಹಿಂದೆಯೇ ಭರದ ಸಿದ್ಧತೆಗಳು ನಡೆದಿದೆ.
ನಗರ ಮತ್ತು ಹೊರವಲಯದ ಮಾರುಕಟ್ಟೆ, ಅಂಗಡಿ, ಮಾಲ್, ಚರ್ಚ್ ಮತ್ತು ಕ್ರೆಸ್ತರ ಮನೆಗಳಲ್ಲಿ ಎಂದಿನಂತೆ ನಾನಾ ರೀತಿಯ ತಯಾರಿಗಳಾಗಿವೆ. ಅಂಗಡಿ-ಮುಂಗಟ್ಟು, ಮಾಲ್-ಮಳಿಗೆಗಳಲ್ಲಿ ಕ್ರಿಸ್ಮಸ್ ಸಂಭ್ರಮಕ್ಕೆ ಸಂಬಂಧಿಸಿದ ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿದ್ದು, ಖರೀದಿಯ ಭರಾಟೆಯೂ ಬಿರುಸುನಿಂದ ಕೂಡಿವೆ.
ಕ್ರಿಸ್ಮಸ್‌ಗೆ ಪೂರ್ವಭಾವಿಯಾಗಿ ಧಾರ್ಮಿಕ ಸಿದ್ಧತೆ ‘ಅಡ್ವೆಂಟ್’ ಈಗಾಗಲೆ ಆರಂಭವಾಗಿದೆ. ಅಂದಿನಿಂದಲೇ ಚರ್ಚ್‌ಗಳಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ಸಿಕ್ಕಿವೆ. ಕ್ರೈಸ್ತರ ಮನೆಗಳಲ್ಲಿ ಮತ್ತು ಚರ್ಚ್‌ಗಳಲ್ಲಿ ಕ್ರಿಸ್ಮಸ್ ಅಲಂಕಾರ, ಗೋದಲಿ (ಕ್ರಿಬ್) ಸಿದ್ದಗೊಂಡಿವೆ. ಕ್ರಿಸ್ಮಸ್ ಗೀತೆಗಳ (ಕ್ಯಾರಲ್) ಗಾಯನಕ್ಕೆ ಸಂಬಂಧಿಸಿ ಚರ್ಚ್‌ಗಳಲ್ಲಿ ತರಬೇತಿಯೂ ಆಗಿದೆ.
ಕ್ರಿಸ್ಮಸ್ ಆಚರಣೆಯ ಸಡಗರವನ್ನು ಇಮ್ಮಡಿಗೊಳಿಸುವ ಬಾಹ್ಯ ಸಂಭ್ರಮಕ್ಕೆ ಡಿಸೆಂಬರ್ ತಿಂಗಳ ಆರಂಭದಲ್ಲಿಯೇ ಚಾಲನೆ ದೊರೆತಿದ್ದು, ಕ್ರಿಸ್ಮಸ್ ಸಂತೋಷವನ್ನು ವಿನಿಮಯ ಮಾಡಿಕೊಳ್ಳಲು ಕಳುಹಿಸುವ ಕ್ರಿಸ್ಮಸ್ ಶುಭಾಶಯ ಕಾರ್ಡುಗಳು (ಗ್ರೀಟಿಂಗ್ಸ್) ಕೂಡ ಭರದಿಂದ ಮಾರಾಟವಾಗುತ್ತಿದೆ. ಮನೆ-ಮನೆಯ ಆವರಣ, ಚರ್ಚ್‌ಗಳನ್ನು ಹಾಗೂ ಗೋದಲಿ (ಕ್ರಿಬ್) ಗಳನ್ನು ಅಲಂಕರಿಸುವ ನಕ್ಷತ್ರಗಳು, ಘಂಟೆ (ಬೆಲ್) ಗಳ ಸಾಲು, ಕ್ರಿಸ್ಮಸ್ ಟ್ರೀ, ಸಾಂತಕ್ಲಾಸ್ ವೇಷ ಭೂಷಣ ಇತ್ಯಾದಿಗಳನ್ನು ಕೂಡ ಮಾರುಕಟ್ಟೆಗಳಲ್ಲಿ ಕಾಣಬಹುದಾಗಿದೆ.
ಕ್ರಿಸ್ಮಸ್ ಹಬ್ಬದೊಂದಿಗೆ ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಮಾಲ್ ಮತ್ತು ಮಳಿಗೆಗಳಲ್ಲಿ ಹಾಗೂ ಬೃಹತ್ ಕಟ್ಟಡಗಳು ವಿದ್ಯುತ್ ದೀಪಗಳಿಂದ ಅಲಂಕೃತವಾಗಿವೆ.
ಕ್ರಿಸ್ಮಸ್ ಅಲಂಕಾರಕ್ಕೆ ಸಂಬಂಧಿಸಿ ಅನೇಕ ಹೊಸ ಬಗೆಯ ವಸ್ತುಗಳು ಮಾರುಕಟ್ಟೆಗೆ ಬಂದಿವೆ. ಸ್ಥಳೀಯವಾಗಿ ತಯಾರಿಸಿದ ಹಾಗೂ ಆಮದು ಮಾಡಿದ ಕ್ರಿಸ್ಮಸ್ ಕ್ರಿಬ್‌ಸೆಟ್, ಕ್ರಿಸ್ಮಸ್ ಟ್ರೀ, ವಿವಿಧ ವಿಗ್ರಹಗಳು, ರೋಸರಿಗಳು, ಕ್ಯಾಂಡಲ್ ಮತ್ತು ಕ್ಯಾಂಡಲ್ ಸೆಟ್, ಸ್ಪೆಷಲ್ ಬೆಲ್‌ಗಳು, ಸಾಂತಾ ಕ್ಲಾಸ್ ಡ್ರೆಸ್, ಲೈಟಿಂಗ್ಸ್, ಬಗೆ ಬಗೆಯ ನಕ್ಷತ್ರಗಳ ಅಪಾರ ಸಂಗ್ರಹವನ್ನು ಕಾಣಬಹುದಾಗಿದೆ.
ಕ್ರಿಸ್ಮಸ್ ತಿಂಡಿ ಕುಸ್ವಾರ್ : ಬೇಕರಿಗಳಲ್ಲಿ ಕ್ರಿಸ್ಮಸ್ ಕೇಕ್ ಮತ್ತು ವಿಶೇಷ ತಿಂಡಿ ‘ಕುಸ್ವಾರ್’ ತಯಾರಿ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿವೆ. ಕ್ರಿಸ್ಮಸ್ ಸ್ಪೆಷಲ್ ಕೇಕ್ ಜತೆಗೆ ವಿವಿಧ ನಮೂನೆಯ ಕೇಕ್‌ಗಳಾದ ಆರ್ಡಿನರಿ ಪ್ಲಮ್ ಕೇಕ್, ಘೀ ಪ್ಲಮ್ ಕೇಕ್, ವೈಟ್ ಪ್ಲಮ್ ಕೇಕ್, ಎಗ್‌ಲೆಸ್ ಪ್ಲಮ್ ಕೇಕ್, ಶುಗರ್ ಫ್ರೀ ಪ್ಲಮ್ ಕೇಕ್‌ಗಳನ್ನು ತಯಾರಿಸಲಾಗಿದೆ.