ಉಡುಪಿ ಜಿಲ್ಲೆಯಲ್ಲಿ ಚಿರತೆ ದಾಳಿ ಭಾರೀ ಹೆಚ್ಚಳ: ಪ್ರಕಾಶ್ ನಟಾಲ್ಕರ್

ಅರಣ್ಯ ಇಲಾಖೆಯಿಂದ ಸನ್ಮಾನ, ಹೊಸ ವರ್ಷದ ಡೈರಿ ಬಿಡುಗಡೆ

Update: 2022-12-24 14:54 GMT

ಉಡುಪಿ: ವಿವಿಧ ಕಾರಣಗಳಿಗಾಗಿ ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದ ಜನವಸತಿ ಪ್ರದೇಶಗಳಲ್ಲಿ ಚಿರತೆಗಳ ದಾಳಿ ವಿಪರೀತವಾಗಿ ಹೆಚ್ಚಳವಾಗಿದೆ. ಆದರೆ ಅರಣ್ಯ ರಕ್ಷಕರ ದಕ್ಷತೆಯಿಂದಾಗಿ ಜನರಿಗೆ ಇದರಿಂದ ಯಾವುದೇ ತೊಂದರೆಯಾಗಿಲ್ಲ ಎಂದು ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್.ನಟಾಲ್ಕರ್ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಅರಣ್ಯ ರಕ್ಷಕ ಮತ್ತು ವೀಕ್ಷಕರ ಸಂಘ ಕುಂದಾಪುರ ಪ್ರಾದೇಶಿಕ ಹಾಗೂ ಕುದುರೆಮುಖ ವನ್ಯಜೀವಿ ವಿಭಾಗದ ವತಿಯಿಂದ ನಗರದ ಕಿದಿಯೂರು ಹೊಟೇಲ್‌ನ ಶೇಷಶಯನ ಹಾಲ್‌ನಲ್ಲಿ ಶನಿವಾರ ಆಯೋಜಿಸಲಾದ ಹೊಸ ವರ್ಷದ ಡೈರಿ ಬಿಡುಗಡೆ, ನಿವೃತ್ತ ಅರಣ್ಯರಕ್ಷಕರು ಮತ್ತು ವೀಕ್ಷಕರು, ಸಾರ್ವಜನಿಕ ಸೇವೆ ಸಲ್ಲಿಸಿದವರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಾರ್ವಜನಿಕರ ಸಹಕಾರ ಇಲ್ಲದಿದ್ದರೆ ಅರಣ್ಯ ರಕ್ಷಕರು ಹಾಗೂ ವೀಕ್ಷಕರು ತಮ್ಮ ಕರ್ತವ್ಯವನ್ನು ದಕ್ಷತೆಯಿಂದ ನಿರ್ವಹಿಸಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಪ್ರತಿ ದಿನವೆಂಬಂತೆ ಒಂದಿಲ್ಲೊಂದು ಕಡೆ ಕಂಡುಬರುತ್ತಿರುವ ಚಿರತೆ ದಾಳಿಯ ಸಂದರ್ಭದಲ್ಲಿ ನಮ್ಮ ಅರಣ್ಯ ರಕ್ಷಕರು ಸಮಯಪ್ರಜ್ಞೆ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸುತಿದ್ದಾರೆ. ಇಂಥ ಸಂದರ್ಭದಲ್ಲಿ ಚಿರತೆ ಜನರ ಮೇಲೆ ಆಕ್ರಮಣ ನಡೆಸದಂತೆ ಜನತೆಯನ್ನು ನಿಯಂತ್ರಿಸುವುದೇ ದೊಡ್ಡ ತಲೆನೋವಾ ಗಿರುತ್ತದೆ ಎಂದವರು ಹೇಳಿದರು.

ರಾಜ್ಯದಲ್ಲಿ ಅರಣ್ಯ ರಕ್ಷಣೆ ಹಾಗೂ ಸಂರಕ್ಷಣೆ ಎಷ್ಟೊಂದು ಕಷ್ಟ ಎಂಬುದು ಎಲ್ಲರಿಗೂ ಗೊತ್ತು. ಆದರೆ ಜನತೆಗೆ ನಮ್ಮ ಮೇಲೆ ನಂಬಿಕೆ ಪೂರ್ಣ ಪ್ರಮಾಣದಲ್ಲಿ ಇದ್ದಂತಿಲ್ಲ. ಇದನ್ನು ಉಳಿಸಿಕೊಳ್ಳಲು ನಾವು ಹೆಚ್ಚೆಚ್ಚು ಜನಪರವಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಕೆಲವೊಂದು ಸಂದರ್ಭದಲ್ಲಿ ನಾವು ಜನರ ಆಕ್ರಮಣವನ್ನೂ ಎದುರಿಸ ಬೇಕಾಗುತ್ತದೆ. ಆದರೆ ನಾವು ಸಂಯಮದಿಂದ ಕಾನೂನಿನ ಚೌಕಟ್ಟಿನೊಳಗೆ  ಕೆಲಸ ಮಾಡಬೇಕು ಎಂದ ನಟಾಲ್ಕರ್, ಸಂಘದ ಬೇಡಿಕೆಯಾದ ಸ್ವಂತ ಸಭಾಭವನದ ನಿರ್ಮಾಣಕ್ಕೆ ಸಾಧ್ಯವಿರುವ ಎಲ್ಲಾ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಸಂಘ ಪ್ರತಿವರ್ಷ ಹೊರತರುವ ಹೊಸವರ್ಷದ ಡೈರಿಯನ್ನು ಪ್ರಕಾಶ್ ನಟಾಲ್ಕರ್ ಬಿಡುಗಡೆಗೊಳಿಸಿದರು. ರಾಜ್ಯ ಅರಣ್ಯ ರಕ್ಷಕ-ವೀಕ್ಷಕ ಸಂಘದ ಕುಂದಾಪುರ ಪ್ರಾದೇಶಿಕ ಹಾಗೂ ಕುದುರೆಮುಖ ವನ್ಯಜೀವಿ ವಿಭಾಗ ಅಧ್ಯಕ್ಷ ಕೇಶವ ಪೂಜಾರಿ ಎಂ. ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ, ಕುಂದಾಪುರ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಉದಯ್ ಎಂ.ನಾಯಕ್, ಕುದುರೆಮುಖ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಅಜಿತ್ ಪಾಟೀಲ್, ಮೂಡಬಿದ್ರೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಎನ್, ಉಡುಪಿ ಅರಣ್ಯ ಸಂಚಾರಿ ದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್, ಚಿದಾನಂದಪ್ಪ, ಉಡುಪಿ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಕೆ.ದಿನಕರ ಶೆಟ್ಟಿ ಅಂಪಾರು ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ರವಿ ಅತಿಥಿಗಳನ್ನು ಸ್ವಾಗತಿಸಿದರೆ, ಸಂಘದ ಗೌರವಾಧ್ಯಕ್ಷ ಎಚ್.ದೇವರಾಜ ಪಾಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿವಮೊಗ್ಗ ಸಂಘದ ಪದಾಧಿಕಾರಿ ಶ್ರೀನಿವಾಸ ವಂದಿಸಿದರೆ, ಸತೀಶ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.

Similar News