ಉಡುಪಿಯಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ ಉದ್ಘಾಟಿಸಿದ ಕೇಂದ್ರ ಸಚಿವ ಅನುರಾಗ್ ಠಾಕೂರ್

'4 ತಿಂಗಳೊಳಗೆ ಬ್ರಹ್ಮಾವರಕ್ಕೆ ಎಫ್‌ಎಂ ಸ್ಟೇಶನ್ ಮಂಜೂರು'

Update: 2022-12-24 16:51 GMT

ಉಡುಪಿ: ಇನ್ನು ನಾಲ್ಕು ತಿಂಗಳೊಳಗೆ ಉಡುಪಿ ಜಿಲ್ಲೆಗೆ ಬ್ರಹ್ಮಾವರದಲ್ಲಿ ಎಫ್‌ಎಂ ರೇಡಿಯೋ ಸ್ಟೇಶನ್‌ನ್ನು ಮಂಜೂರು ಮಾಡುವುದಾಗಿ ಕೇಂದ್ರ ಯುವ ವ್ಯವಹಾರ ಹಾಗೂ ಕ್ರೀಡೆ ಮತ್ತು ವಾರ್ತಾ ಹಾಗೂ ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್ ಭರವಸೆ ನೀಡಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ಉಡುಪಿಯ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ 2.30 ಕೋಟಿ ರೂ.ವೆಚ್ಚದಲ್ಲಿ ಪ್ರಾರಂಭಿಸಲಾದ ಕ್ರೀಡಾ ವಿಜ್ಞಾನ ಕೇಂದ್ರವನ್ನು ಶನಿವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕರ್ನಾಟಕದಲ್ಲಿ ತಲಾ 8 ಜಿಲ್ಲೆಗಳಿಗೆ ಒಂದರಂತೆ ಇನ್ನೂ 6-7 ಕ್ರೀಡಾ ವಿಜ್ಞಾನ ಕೇಂದ್ರಗಳನ್ನು ಮಂಜೂರು ಮಾಡುವಂತೆ ರಾಜ್ಯ ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣ ಗೌಡ ಅವರು ಮಾಡಿಕೊಂಡ ಮನವಿಗೆ ಸ್ಪಂದಿಸಿದ  ಸಚಿವ ಅನುರಾಗ್‌ಸಿಂಗ್ ಠಾಕೂರ್, ಭಾರತದ ಕ್ರೀಡಾ ಪ್ರಾಧಿಕಾರಿದೊಂದಿಗೆ ಸಮಾಲೋಚಿಸಿ ಈ ಬಗ್ಗೆ ನಿರ್ಧರಿಸುವುದಾಗಿಯೂ ತಿಳಿಸಿದರು.

ಭಾರತವನ್ನು ಕ್ರೀಡಾ ಬಲಾಢ್ಯ ದೇಶವನ್ನಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯಂತೆ ದೇಶದಲ್ಲಿ ಅತ್ಯುತ್ತಮ ಕ್ರೀಡಾಪಟುಗಳು ರೂಪುಗೊಳ್ಳಲು ಅಗತ್ಯವಿರುವ ಎಲ್ಲಾ ರೀತಿಯ ವೈಜ್ಞಾನಿಕ ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ ಪ್ರತಿಭಾವಂತ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗುತಿದ್ದು, ಅವರಿಗೆ ಎಲ್ಲಾ ರೀತಿಯಲ್ಲೂ ಬೆಂಬಲ ನೀಡಲಾಗುತ್ತಿದೆ. ಮುಂದಿನ ಒಲಿಂಪಿಕ್ಸ್ ವೇಳೆಗೆ ಭಾರತ ಅತ್ಯುತ್ತಮ ಪ್ರದರ್ಶನ ನೀಡಬೇಕೆಂಬ ಸಂಕಲ್ಪ ನಮ್ಮದಾಗಿದೆ ಎಂದರು.

2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದಾಗ ಬಜೆಟ್‌ನಲ್ಲಿ ಕ್ರೀಡೆಗೆ ಮೀಸಲಿರಿಸಿದ ಮೊತ್ತ 864 ಕೋಟಿ ರೂ., ಈಗ ಅದನ್ನು 3100 ಕೋಟಿ ರೂ.ಗಳಿಗೆ ಏರಿಸಲಾಗಿದೆ. ಅದೇ ರೀತಿ ದೇಶದಲ್ಲಿ ಕ್ರೀಡಾ ಮೂಲ ಭೂತ ಸೌಕರ್ಯಗಳ ಅಭಿವೃದ್ಧಿಗೆ 2014ರಲ್ಲಿ ಕಾದಿರಿಸಿದ ಮೊತ್ತ 638 ಕೋಟಿ ರೂ.ಗಳಾದರೆ ಈಗ ಅದು 2700 ಕೋಟಿ ರೂ.ಗಳಿಗೇರಿದೆ ಎಂದರು.

ದೇಶದಲ್ಲೀಗ ಖೇಲೋ ಇಂಡಿಯಾ ಗೇಮ್ಸ್‌ಗೆ ನೀಡಲಾಗುತ್ತಿರುವ ಮೊತ್ತ 3136 ಕೋಟಿ ರೂ.ಗಳಾಗಿದೆ. ದೇಶದ ಸುಮಾರು 1700 ಕ್ರೀಡಾಂಗಣಗಳನ್ನು ಆನ್‌ಲೈನ್‌ನಲ್ಲಿ ಜಿಯೋಟ್ಯಾಗ್ ಮಾಡಲಾಗಿದೆ ಎಂದು ಅನುರಾಗ್‌ ಸಿಂಗ್ ಠಾಕೂರ್ ತಿಳಿಸಿದರು.

ಕರ್ನಾಟಕ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ದೇಶದಲ್ಲಿ ಮೊದಲ ಮೂರರಲ್ಲಿ ಒಂದು ಸ್ಥಾನವನ್ನು ಪಡೆಯುತ್ತಿದೆ. ಹೀಗಾಗಿ ಕೇಂದ್ರ ಸರಕಾರದದಿಂದ ರಾಜ್ಯ ಸರಕಾರಕ್ಕೆ ಕ್ರೀಡಾ ಅಭಿವೃದ್ಧಿಗಾಗಿ ಎಲ್ಲಾ ರೀತಿಯ ಅಗತ್ಯ ನೆರವನ್ನು ನೀಡಲಾಗುವುದು ಎಂದವರು ಘೋಷಿಸಿದರು.

ಸರಕಾರ ಕ್ರೀಡೆಗೆ ಪ್ರೋತ್ಸಾಹ ನೀಡುವುದರೊಂದಿಗೆ ವಿಶ್ವದರ್ಜೆಯ ಕ್ರೀಡಾಪಟುಗಳು ಹೊರಹೊಮ್ಮಲು ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಲು ಸಿದ್ಧವಿದೆ. ಬಜೆಟ್‌ನಲ್ಲಿ ಅನುದಾನವನ್ನೂ ಹೆಚ್ಚಿಸಿದ್ದೇವೆ. ಈ ನಿಟ್ಟಿನಲ್ಲಿ ಸಮಾಜಕ್ಕೆ ಹಾಗೂ ಹೆತ್ತವರಿಗೂ ಜವಾಬ್ದಾರಿ ಇದೆ.ಪೋಷಕರು  ಮಕ್ಕಳ ಮೇಲೆ ನಿರ್ಬಂಧ ಹೇರದೇ ಹೆಚ್ಚು ಹೆಚ್ಚಾಗಿ ಮಕ್ಕಳನ್ನು ಕ್ರೀಡಾಂಗಣಕ್ಕೆ ಕಳುಹಿಸಬೇಕು. ಕ್ರೀಡೆಯಲ್ಲಿರುವ ಮಕ್ಕಳ ಮೇಲೆ ಒತ್ತಡ ಹೇರದೇ, ಅವರ ಜವಾಬಾರಿಯನ್ನು ಕೋಚ್‌ಗಳ ಮೇಲೆ ಬಿಟ್ಟು ಅವರಲ್ಲಿರುವ ಕ್ರೀಡಾ  ಪ್ರತಿಭೆ ಅರಳುವುದನ್ನು ನೋಡಿ ಹರ್ಷ ಪಡಿ ಎಂದರು.

ಸಮಾರಂಭದಲ್ಲಿ ಸಚಿವ ಅನುರಾಗ್‌ಸಿಂಗ್ ಠಾಕೂರ್ ಅವರು ಒಲಿಂಪಿಯನ್ ಹಾಗೂ ಇತ್ತೀಚೆಗಷ್ಟೇ ಧ್ಯಾನ್‌ಚಂದ್ ಜೀವನಸಾಧನೆ ಪ್ರಶಸ್ತಿ ಗೆದ್ದಿರುವ ಪ್ರಸ್ತುತ ಅಥ್ಲೆಟಿಕ್ ಕೋಚ್ ಆಗಿರುವ ಕುಂದಾಪುರ ಅಶ್ವಿನಿ ಅಕ್ಕುಂಜೆ ಅವರನ್ನು ಸನ್ಮಾನಿಸಿದರು. ಸಭೆಯ ಬಳಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ  ಉದಯೋನ್ಮುಖ ಕ್ರೀಡಾಪಟುಗಳೊಂದಿಗೆ ಕೆಲಕಾಲ ಸಂವಾದ ನಡೆಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಜ್ಯ ರೇಷ್ಮೆ ಕೃಷಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣ ಗೌಡ ಮಾತನಾಡಿ, ಕರ್ನಾಟಕವನ್ನು ರಾಜ್ಯದಲ್ಲೇ ಬಲಿಷ್ಠ ಕ್ರೀಡಾಶಕ್ತಿಯಾಗಿ ಬೆಳೆಸಲು ಅನೇಕ ಕಾರ್ಯಕ್ರಮಗಳನ್ನು ಇಲಾಖೆ ಅನುಷ್ಠಾನಗೊಳಿಸಿದೆ. 504 ಕೋಟಿ ರೂ.ಗಳ ವೆಚ್ಚದಲ್ಲಿ ಪ್ರತಿ ಗ್ರಾಪಂ ಮಟ್ಟದಲ್ಲಿ ‘ಕ್ರೀಡಾ ಅಂಗಣ’ವನ್ನು ಪ್ರಾರಂಬಿಸುತಿದ್ದೇವೆ ಎಂದರು.

ಅದೇ ರೀತಿ ಗ್ರಾಪಂ ಮಟ್ಟದಲ್ಲಿ ಕ್ರೀಡಾಪಟುಗಳನ್ನು ಸಿದ್ಧಪಡಿಸಲು 400 ಕೋಟಿ ರೂ.ವೆಚ್ಚದಲ್ಲಿ ವಿವೇಕಾನಂದ ಯುವ ಶಕ್ತಿ ಕೇಂದ್ರವನ್ನು ತಲಾ 10 ಲಕ್ಷ ರೂ. ಅನುದಾನದಲ್ಲಿ ತೆರೆಯುತಿದ್ದು, ಇದರಲ್ಲಿ 1.50 ಲಕ್ಷ ರೂ. ಸಬ್ಸಿಡಿ ಆಗಿರುತ್ತದೆ ಎಂದರು.

ಅಮೃತ ಯೋಜನೆಯಡಿ ಒಟ್ಟು 75 ಮಕ್ಕಳನ್ನು ದತ್ತು ಪಡೆದಿದ್ದು, ತಲಾ 10 ಲಕ್ಷ ರೂ. ಖರ್ಚು ಮಾಡಿ ಅವರಿಗೆ  ಕ್ರೀಡಾ ತರಬೇತಿಯನ್ನು ನೀಡು ತಿದ್ದೇವೆ. ಅವರನ್ನು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗಿ ಬೆಳೆಸುವ ಗುರಿ ನಮಗಿದೆ ಎಂದರು.

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವ ಶೋಭಾ ಕರಂದ್ಲಾಜೆ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ದಿ ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ ಕಲ್ಮಾಡಿ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಸಿಇಓ  ಪ್ರಸನ್ನ ಎಚ್., ಎಸ್ಪಿ ಹಾಕೆ ಅಕ್ಷಯ್ ಮಚ್ಚೀಂದ್ರ, ಮಣಿಪಾಲ ವಿವಿ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಮಂಗಳೂರು ವಿವಿ ರಿಜಿಸ್ಟ್ರಾರ್ ಡಾ.ಕಿಶೋರ್‌ಕುಮಾರ್ ಉಪಸ್ಥಿತರಿದ್ದರು.

ರಾಜ್ಯ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಆಯುಕ್ತ ಮುಲ್ಲಾಯ್ ಮುಹಿಲನ್ ಎಂ.ಪಿ. ಅತಿಥಿಗಳನ್ನು ಸ್ವಾಗತಿಸಿದರೆ, ಉಡುಪಿ ಶಾಸಕ ಕೆ.ರಘುಪತಿ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಣಿಪಾಲ ಕೆಎಂಸಿಯ ಡಾ.ರೀನಾ ಪರ್ವಿನ್ ಅವರು ಕಾರ್ಯಕ್ರಮ ನಿರೂಪಿಸಿದರು.

ದೇಹದ ಬ್ಯಾಲೆನ್ಸ್ ಚೆಕ್ ಮಾಡಿ ಸಚಿವರು!
ಉಡುಪಿಯಲ್ಲಿ ಕ್ರೀಡಾ ವಿಜ್ಞಾನ ಕೇಂದ್ರವನ್ನು ಉದ್ಘಾಟಿಸಿದ ಕೇಂದ್ರ ಸಚಿವ ಅನುರಾಗ್‌ಸಿಂಗ್ ಠಾಕೂರ್, ಕೇಂದ್ರದಲ್ಲಿ ಅಳವಡಿಸಲಾದ ಸಲಕರಣೆಗಳನ್ನು ಪರಿಶೀಲಿಸಿದರು.
ಅಲ್ಲಿದ್ದ ಬ್ಯಾಲೆನ್ಸ್ ಚೆಕ್ಕಿಂಗ್ ಸಿಸ್ಟಮ್‌ನ್ನು ನೋಡಿ ತನ್ನ ದೇಹದ ಬ್ಯಾಲೆನ್ಸಿಂಗ್‌ನ್ನು ಅವರು ಪರಿಶೀಲಿಸಿದರು. ಅವರ ದೇಹದ ಬ್ಯಾಲೆನ್ಸ್ ಸರಿಯಾಗಿರುವುದನ್ನು ಯಂತ್ರ ತೋರಿಸಿತು. ಕೂತು, ನಿಂತು ಅವರು ಅದನ್ನು ಪರಿಶೀಲಿಸಿದರು. ಈ ಬಗ್ಗೆ ವಿವರಗಳನ್ನು ಸಚಿವರು ಪಡೆದುಕೊಂಡರು.

Similar News