ಶೂಟಿಂಗ್‌ ಸ್ಥಳದಲ್ಲೇ ಆತ್ಮಹತ್ಯೆ ಮಾಡಿಕೊಂಡ ಯುವ ನಟಿ

Update: 2022-12-24 17:28 GMT

ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸೈ ಎಂಬಲ್ಲಿ ಧಾರಾವಾಹಿಯ ಸೆಟ್‌ನಲ್ಲಿ ಕಿರುತೆರೆ ನಟಿ ತುನಿಶಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 20 ವರ್ಷದ ನಟಿ ಸೆಟ್‌ನಲ್ಲಿದ್ದ ವಾಶ್‌ರೂಮ್‌ಗೆ ಹೋಗಿ ಬಹಳ ಹೊತ್ತಾದರೂ ಹಿಂತಿರುಗಿರಲಿಲ್ಲ. ಬಾಗಿಲು ಒಡೆದು ನೋಡಿದಾಗ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಸೆಟ್‌ನಲ್ಲಿದ್ದ ಸಿಬ್ಬಂದಿಗಳು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿದೆ.

ಪೊಲೀಸ್ ತಂಡ ಘಟನಾ ಸ್ಥಳದಲ್ಲಿದೆ ಎಂದು ವಲಿವ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಕೈಲಾಶ್ ಬರ್ವೆ ತಿಳಿಸಿದ್ದಾರೆ. ತುನಿಶಾ ಶರ್ಮಾ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಸೆಟ್‌ನಲ್ಲಿದ್ದವರು ಹೇಳಿದ್ದಾರೆ, ಆದರೆ, ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.


  ಸೋನಿ ಟಿವಿ ಶೋ 'ಮಹಾರಾಣಾ ಪ್ರತಾಪ್' ನಲ್ಲಿ ಬಾಲನಟಿಯಾಗಿ ವೃತ್ತಿ ಬದುಕನ್ನು ಪ್ರಾರಂಭಿಸಿದ ಅವರು, ಹಲವಾರು ಕಿರುತೆರೆ ಕಾರ್ಯಕ್ರಮಗಳು ಮತ್ತು ಬಾಲಿವುಡ್ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ತುನಿಶಾ ಶರ್ಮಾ ಸಾಯುವ ಕೆಲವೆ ಗಂಟೆಗಳ ಮುನ್ನ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರು. ಶೂಟಿಂಗ್‌ ನಡೆಯುವ ಸ್ಥಳದಿಂದಲೇ ತಮ್ಮ ಚಿತ್ರವೊಂದನ್ನು ಅವರು ಹಂಚಿಕೊಂಡಿದ್ದರು.

Similar News