ಭಾರತ ಜೋಡೊ ಯಾತ್ರೆ : ನಿರುದ್ಯೋಗ,ಹಣದುಬ್ಬರ,ದ್ವೇಷದ ವಿರುದ್ಧ ಧ್ವನಿಯೆತ್ತಿದ ಅಂಧ ವಿದ್ಯಾರ್ಥಿಗಳು

Update: 2022-12-24 17:38 GMT

ಹೊಸದಿಲ್ಲಿ,ಡಿ.24: ನಿರುದ್ಯೋಗ,ಹಣದುಬ್ಬರ,ದ್ವೇಷದ ವಿರುದ್ಧ ಧ್ವನಿಯೆತ್ತಲು ದಕ್ಷಿಣ ದಿಲ್ಲಿಯ ಲಾಜಪತ್ ನಗರದ ಅಂಧ ವಿದ್ಯಾರ್ಥಿಗಳ ಗುಂಪೊಂದು ಶನಿವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ನೇತೃತ್ವದ ಭಾರತ ಜೋಡೊ ಯಾತ್ರೆಯ ಮಾರ್ಗದಲ್ಲಿ ಶಿಬಿರವನ್ನು ಸ್ಥಾಪಿಸಿತ್ತು.

ಬ್ಯಾನರ್ಗಳನ್ನು ಹಿಡಿದುಕೊಂಡು ಅಪೋಲೊ ಆಸ್ಪತ್ರೆಯ ಮಾರ್ಗದಲ್ಲಿ ಸೇರಿದ್ದ ಸುಮಾರು 15-20 ಅಂಧ ವಿದ್ಯಾರ್ಥಿಗಳು ‘ನಫರತ್ ಛೋಡೊ,ಭಾರತ ಜೋಡೊ (ದ್ವೇಷವನ್ನು ಬಿಡಿ,ಭಾರತವನ್ನು ಒಗ್ಗೂಡಿಸಿ)’ ಎಂಬ ಘೋಷಣೆಗಳನ್ನು ಕೂಗಿದರು.

ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ವಿರುದ್ಧ ಪ್ರತಿಭಟಿಸಲು ತಾವು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾಗಿ ಸುದ್ದಿಸಂಸ್ಥೆಗೆ ತಿಳಿಸಿದ ಅಂಧ ವಿದ್ಯಾರ್ಥಿ ಸಾರಾಂಶ,ಹಲವಾರು ಅಂಧ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಅತ್ಯುತ್ತಮ ಸಾಧನೆಗಳನ್ನು ಮಾಡಿದ್ದಾರೆ,ಆದರೆ ವರ್ಷಗಳಿಂದಲೂ ನಿರುದ್ಯೋಗಿಗಳಾಗಿ ಉಳಿದುಕೊಂಡಿದ್ದಾರೆ ಎಂದು ಹೇಳಿದರು.

‘ದೇಶದಲ್ಲಿ ಉದ್ಯೋಗಗಳ ಕೊರತೆಯಿಂದಾಗಿ ಸುಶಿಕ್ಷಿತ ಜನರು ನಿರುದ್ಯೋಗಿಗಳಾಗಿ ಅಲೆದಾಡುತ್ತಿದ್ದಾರೆ. ನಮಗಾಗಿ ಸಾಕಷ್ಟು ಉದ್ಯೋಗಗಳು ಇಲ್ಲದಿರುವಾಗ ಶಿಕ್ಷಣ ಪಡೆಯುವುದರಲ್ಲಿ ಯಾವ ಅರ್ಥವಿದೆ? ಹಲವಾರು ಅಂಧ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉತ್ತಮ ಸಾಧನೆಗಳನ್ನು ಮಾಡುತ್ತಿದ್ದಾರೆ,ಆದರೆ ಪ್ರಯೋಜನವೇನು? ಈ ಎಲ್ಲ ಪದವಿಗಳಿದ್ದರೂ ನಾವೇನು ಮಾಡಲಿದ್ದೇವೆ ’ಎಂದು 14 ಹರೆಯದ ಸಾರಾಂಶ ಪ್ರಶ್ನಿಸಿದರು.

ಸಮುದಾಯಗಳ ನಡುವೆ ದ್ವೇಷ ನಿರ್ಮೂಲನದ ಉದ್ದೇಶದೊಂದಿಗೆ ಮತ್ತು ಬೆಲೆಏರಿಕೆಯ ವಿರುದ್ಧ ಧ್ವನಿಯೆತ್ತಲು ತಾನು ಯಾತ್ರೆಯಲ್ಲಿ ಭಾಗವಹಿಸಿದ್ದಾಗಿ ತಿಳಿಸಿದ ಅಂಧ ವಿದ್ಯಾರ್ಥಿ ಗುಲ್ಶನ್ ಕುಮಾರ (12),‘ನಮ್ಮದು ಕೆಳ ಮಧ್ಯಮ ವರ್ಗದ ಕುಟುಂಬವಾಗಿದ್ದು,ನನ್ನ ತಂದೆ ಕೃಷಿಕರಾಗಿದ್ದಾರೆ. ಅವರು ಏಳು ಜನರ ಕುಟುಂಬದ ತುತ್ತಿನ ಚೀಲಗಳನ್ನು ತುಂಬಿಸಬೇಕಿದೆ. ಹಣದುಬ್ಬರವು ನನ್ನ ಕುಟುಂಬದ ಮೇಲೆ ದುಷ್ಪರಿಣಾಮವನ್ನು ಬೀರಿದೆ.  ನನ್ನ ತಂದೆಯ ಹೊರತು ಕುಟುಂಬದ ಯಾರಿಗೂ ಆದಾಯವಿಲ್ಲ. ನನಗೆ ನಾಲ್ವರು ಸೋದರಿಯರಿದ್ದು,ಅವರ ಪೈಕಿ ಓರ್ವಳು ಅಂಧೆಯಾಗಿದ್ದಾಳೆ,ಇಬ್ಬರು ಪದವಿಗಳನ್ನು ಹೊಂದಿದ್ದರೂ ಉದ್ಯೋಗಗಳ ಕೊರತೆಯಿಂದಾಗಿ ನಿರುದ್ಯೋಗಿಗಳಾಗಿದ್ದಾರೆ ’ಎಂದು ಅಳಲು ತೋಡಿಕೊಂಡರು.

Similar News